ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ

20SPT01
Published on

ಸೋಮವಾರಪೇಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಭೂ ಸುಧಾರಣಾ, ಎಪಿಎಂಸಿ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರದ ಪ್ರಕರಣವನ್ನು ಉಚ್ಚನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇಡೀ ಭಾರತದಲ್ಲೇ ರೈತ ಹಾಗೂ ಪ್ರಗತಿಪರ ಎಂಬ ಹೆಗ್ಗಳಿಕೆಗೆ ಹೊಂದಿರುವ ಕರ್ನಾಟಕದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ಸರ್ಕಾರ ಸುಗ್ರಿವಾಜ್ಞೆ ತಂದಿದೆ. 1974ರಂದು ಜಾರಿಗೆ ಬಂದ ಭೂ ಸುಧಾರಣಾ ಕಾಯ್ದೆ ಉದ್ದೇಶ ಊಳುವವನೆ ಭೂಮಿಯ ಒಡೆಯ ಎಂಬುದಾಗಿತ್ತು. ಆದರೆ, ಈ ಸುಗ್ರಿವಾಜ್ಞೆಯಿಂದ ಉಳ್ಳವನೆ ಭೂಮಿಯ ಒಡೆಯ ಎಂಬಂತಾಗಿದೆ ಎಂದು ಆರೋಪಿಸಿದರು.

ನಂತರ ಶಿರಸ್ತೇದಾರ್ ಮಹೇಶ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಚಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಡಿಸೋಜಾ, ಕಾಂಗ್ರೆಸ್ ವೀಕ್ಷಕರಾದ ಎಡ್ವಿನ್, ಪರಿಶಿಷ್ಟ ಜಾತಿ ಘಟಕದ ರಾಜ್ಯ ಸಮಿತಿ ಸದಸ್ಯ ಬಿ.ಈ.ಜಯೇಂದ್ರ, ಮಡಿಕೇರಿ ಕ್ಷೇತ್ರ ಸಮಿತಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್, ಕಾಂಗ್ರೆಸ್ ಮುಖಂಡರಾದ ಕೆ.ಎಂ.ಲೋಕೇಶ್, ಎಚ್.ಎ.ನಾಗರಾಜು, ಭಾಗ್ಯ, ಎಚ್.ಸಿ.ನಾಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net