ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ಪ್ರತಿಭಟನೆ

protest
Published on

ಮೈಸೂರು: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಯಿತು.


ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಬುಧವಾರ ಜಮಾವಣೆಗೊಂಡ ಪ್ರತಿಭಟನಾಕಾರರು, ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳು ಅಣ್ಣ-ತಮ್ಮಂದಿರಂತಿರಬೇಕು. ಅದು ಬಿಟ್ಟು ತಮಿಳುನಾಡು ಯಾವಾಗಲೂ ನಮ್ಮ ರಾಜ್ಯದ ಮೇಲೆ ಕಾಲು ಕೆರೆದು ಜಗಳಕ್ಕೆ ಬರುತ್ತದೆ. ಸ್ವಲ್ಪವೂ ಮಾನವೀಯತೆ ಇಲ್ಲದಂತೆ ವರ್ತಿಸುತ್ತಿದೆ. ತಮಿಳುನಾಡಿಗೆ ಕಾವೇರಿ ಕಣಿವೆಯ ನೀರಿನ ವಸ್ತುಸ್ಥಿತಿ ತಿಳಿದಿದ್ದರೂ ನೀರು ಕೊಡಿ ಎಂದು ಒತ್ತಾಯಿಸುವುದು ಅತ್ಯಂತ ಖಂಡನೀಯ ಎಂದು ದೂರಿದರು.

ಕಾವೇರಿ ನೀರು ನಿಯಂತ್ರಣ ಸಮಿತಿ ಎರಡು ರಾಜ್ಯಕ್ಕೂ ನ್ಯಾಯ ನೀಡಬೇಕು. ಆದರೆ ಇದು ರಚನೆಯಾಗಿರುವುದೇ ತಮಿಳುನಾಡಿಗಾಗಿ ಅನ್ನಿಸುತ್ತಿದೆ. ಒಮ್ಮೊಯೂ ನಮ್ಮ ರಾಜ್ಯಕ್ಕೆ ನ್ಯಾಯವೇ ಸಿಕ್ಕಿಲ್ಲ ಎಂದು ಕಿಡಿಕಾರಿದರು.

ಈ ಬಾರಿಯಾದರೂ ರಾಜ್ಯ ಸರ್ಕಾರ ಗಟ್ಟಿಯಾಗಿ ನಿಂತು, ರಾಜ್ಯದ ಎಲ್ಲ ಪಕ್ಷಗಳ ನಾಯಕರು ಒಂದಾಗಿ ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯದ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಆದೇಶಕ್ಕೆ ಮಣಿಯಬಾರದು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಮೊದಲಿನಿಂದಲೂ ನೀರಿನ ವಿಚಾರದಲ್ಲಿ ಸರಿಯಾಗಿ ವಾದ ಮಂಡಿಸುತ್ತಿಲ್ಲ. ನಮಗೆ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ಬೆಳೆ ಬೆಳೆಯಲು ನೀರು ಬಿಡಲು ಆದೇಶಿಸುತ್ತಿರುವುದು ಅನ್ಯಾಯ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಇದಕ್ಕೆ ಶಾಶ್ವತ ಪರಿಹಾರ ಸೂಚಿಸಿ ನಮ್ಮ ರಾಜ್ಯದ ರೈತರ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಪದಾಧಿಕಾರಿಗಳಾದ ಸುರೇಶ್ ಗೋಲ್ಡ್, ಪ್ರಭುಶಂಕರ, ವಿಜಯೇಂದ್ರ ಕೃಷ್ಣಯ್ಯ, ಪ್ರಜೀಶ್, ನೇಹಾ, ಪದ್ಮಾ, ಬಸವರಾಜು, ಒಲಂಪಿಯಾ ರವಿ, ರಾಧಾಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net