

ದಾವಣಗೆರೆ: ಹೊಸ ಶಿಕ್ಷಣ ನೀತಿ ರದ್ದುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ನಗರದ ಜಯದೇವ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸ್ವಾತಂತ್ರೃ ಭಾರತದ ಶಿಕ್ಷಣ ಪದ್ಧತಿಯು ಬ್ರಿಟಿಷ್ ವಸಾಹತುಶಾಯಿ ಶಿಕ್ಷಣ ಪದ್ಧತಿಯ ಮುಂದುವರೆದ ಭಾಗವಾಗಿದೆ. ಭಾರತೀಯ ಆಂಶವನ್ನು ಕಳೆದುಕೊಂಡು ಬ್ರಿಟಿಷ್ ಗುಲಾಮಗಿರಿಯ ಪಳೆಯುಳಿಕೆಯಾಗಿದೆ ಎಂಬ ಟೀಕೆಗಳನ್ನು ಎದುರಿಸುತ್ತಲೇ ಬಂದಿದೆ ಎಂದು ದೂರಿದರು.
ಪ್ರಸ್ತುತ ಕೇಂದ್ರ ಸರ್ಕಾರ ಈ ಕುರಿತು ಗಂಭೀರ ನಿಲುವು ಹಾಗೂ ದೃಢ ನಿರ್ಧಾರದಿಂದ ಎಲ್ಲ ಟೀಕೆಗಳಿಗೆ ಉತ್ತರವಾದ ಹಾಗೂ ಕೊರತೆಗಳಿಂದ ಮುಕ್ತವಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ್ದು ಪ್ರಶಂಸಾರ್ಹ. ಇಂತಹ ಶಿಕ್ಷಣ ನೀತಿ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೊಳ್ಳುತ್ತಿರುವ ಹಂತದಲ್ಲಿಯೇ ರದ್ದುಗೊಳಿಸಲು ಹೊರಟಿರುವುದು ಸರಿಯಲ್ಲ ಎಂದರು.
ರಾಜ್ಯ ಸರ್ಕಾರದ ಎನ್‌ಇಪಿ ರದ್ದತಿ ನಿರ್ಧಾರ ಪೂರ್ವಾಗ್ರಹ ಪೀಡಿತ, ರಾಜಕೀಯ ಪ್ರೇರಿತ, ಶಿಕ್ಷಣ ವಿರೋಧಿ ಹಾಗೂ ವಿದ್ಯಾರ್ಥಿಗಳ ಹಿತಕ್ಕೆ ಮಾರಕವಾದುದಾಗಿದೆ ಎಂದು ಖಂಡಿಸಿದರು.
ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೊಟ್ರೇಶ್, ಮಹಾನಗರ ಸಂಘಟನಾ ಕಾರ್ಯದರ್ಶಿ ವಿ. ವರುಣ್, ವಿಜಯ್, ಮೋಹಿತ್, ಆದಿತ್ಯ ಪ್ರತಿಭಟನೆಯಲ್ಲಿದ್ದರು.