ಬಿಆರ್‌ಟಿಎಸ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯ; ಧಾರವಾಡ ಧ್ವನಿ ನೇತೃತ್ವದಲ್ಲಿ ಪಾದಯಾತ್ರೆ

15 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿ- ಧಾರವಾಡ ಅವಳಿನಗರ ನಡುವಿನ ಬಿಆರ್‌ಟಿಎಸ್ ಸಾರಿಗೆ ಯೋಜನೆಯ ಅವೈಜ್ಞಾನಿಕ ವ್ಯವಸ್ಥೆಯಿಂದ ಆಗುತ್ತಿರುವ ಅನಾನುಕೂಲ ಸರಿಪಡಿಸಲು ಒತ್ತಾಯಿಸಿ ಧಾರವಾಡ ಧ್ವನಿ ಸಂಘದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪಾದಯಾತ್ರೆ ನಡೆಸಲಾಯಿತು.
ನವಲೂರು ಸೇತುವೆಯಿಂದ ಜಿಲ್ಲಾಽಕಾರಿ ಕಚೇರಿವರೆಗೆ ನಡೆದ ಪಾದಯಾತ್ರೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು, ವಿವಿಧ ಕಾಲೇಜುಗಳ ಮುಖ್ಯಸ್ಥರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
ಬಿಆರ್‌ಟಿಎಸ್ ಮಾರ್ಗದಲ್ಲಿ ಕೇವಲ ಚಿಗರಿ ಬಸ್‌ಗಳು ಸಂಚರಿಸುತ್ತಿವೆ. ಇಲ್ಲಿ ಸಂಚಾರ ವಿರಳವಾಗಿದ್ದು, ಪಕ್ಕದಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ದಿನೇದಿನೇ ಹೆಚ್ಚಾಗುತ್ತಿದೆ. ಅಕ್ಕಪಕ್ಕ ವಾಹನಗಳ ನಿಲುಗಡೆಯಿಂದ ದ್ವಿಪಥ ರಸ್ತೆ ಮತ್ತಷ್ಟು ಇಕ್ಕಟ್ಟಾಗಿದೆ. ಧಾರವಾಡದ ಲಕ್ಷ್ಮೀ ಟಾಕೀಸ್ ಹಾಗೂ ಯÁಲಕ್ಕಿ ಶೆಟ್ಟರ ಕಾಲನಿಯ ಎದುರು ಮತ್ತು ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದ ಎದುರಿನ ಬ್ಯಾರಿಕೇಡ್ ತೆಗೆಯಬೇಕು. ಜೆಎಸ್‌ಎಸ್ ಕಾಲೇಜಿನ ಮುಂದಿರುವ ಅವೈಜ್ಞಾನಿಕ ಸಿಗ್ನಲ್ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಧಾರವಾಡದ ಜ್ಯುಬಿಲಿ ವೃತ್ತದಿಂದ ನವಲೂರವರೆಗೆ ಮತ್ತು ಉಣಕಲ್ಲದಿಂದ ಚೆನ್ನಮ್ಮ ವೃತ್ತದವರೆಗೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಬಿಆರ್‌ಟಿಎಸ್ ಯೋಜನೆಯ ಲೋಪಗಳನ್ನು ಸರಿಪಡಿಸಲು ಸಾರ್ವಜನಿಕರನ್ನೊಳಗೊಂಡ ಸಮಿತಿ ರಚಿಸಬೇಕು ಎಂದು ಜಿಲ್ಲಾಽಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.
ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ, ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ, ಜಯ ಕರ್ನಾಟಕ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಸುಽÃರ ಮುಧೋಳ, ನವ ಕರ್ನಾಟಕ ಸಂಘಟನೆಯ ಗಿರೀಶ ಪೂಜಾರ, ಉತ್ತರ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ, ಮಾಜಿ ಮೇಯರ್ ಶಿವು ಹಿರೇಮಠ, ಪಾಲಿಕೆ ಸದಸ್ಯ ಶಂಭು ಸಾಲಮನಿ, ಮುಖಂಡರಾದ ಸಂತೋಷ ಪಟ್ಟಣಶೆಟ್ಟಿ, ವೆಂಕಟೇಶ ರಾಯ್ಕರ, ಬಸವರಾಜ ಪೊಮೊಜಿ, ಖಲಂದರ ಮುಲ್ಲಾ, ಶರಣಗೌಡ ಗಿರಡ್ಡಿ, ಮಂಜುನಾಥ ನೀರಲಕಟ್ಟಿ, ಸವಿತಾ ಅಮರಶೆಟ್ಟಿ, ದಲಿತ ಯುವ ಸೇನಾ, ಅಟೋ ಚಾಲಕರ- ಮಾಲೀಕರ ಸಂಘಟನೆಯ ನೂರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net