ಮಾನವ ಕುಲ ಬೆಳೆಸುವ ಮಾತೆ ಆಕಳು, ಜಗದ್ಗುರು ಶ್ರೀ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ,  ಹುಬ್ಬಳ್ಳಿಯಲ್ಲಿ ಗೋ ಭಕ್ತ ಪರಿವಾರದಿಂದ ಪ್ರತಿಭಟನೆ

IMG_20250115_173848_991.jpg
Published on

ಹುಬ್ಬಳ್ಳಿ: ಮಾತೃ ಸ್ವರೂಪಿ ಗೋವುಗಳ ಮೇಲೆ ಬೆಂಗಳೂರಿನಲ್ಲಿ ನಡೆದ ಅಮಾನುಷ ಕೃತ್ಯವನ್ನು ಖಂಡಿಸಿ ನಗರದ ಸಮಸ್ತ ಗೋ ಭಕ್ತ ಪರಿವಾರದ ಆಶ್ರಯದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಹುಬ್ಬಳ್ಳಿ ಮೂರುಸಾವಿರ ಮಠದಿಂದ ಮೆರವಣಿಗೆ ಆರಂಭಿಸಿದ ನೂರಾರು ಜನರು ಮೆರವಣಿಗೆಯುದ್ದಕ್ಕೂ ದುಷ್ಕೃತ್ಯ ಖಂಡಿಸಿ ಘೋಷಣೆ ಮೊಳಗಿಸಿದರು. ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ನಗರದ ಚನ್ನಮ್ಮ ವೃತ್ತದಲ್ಲಿ ಸೇರಿದ ಗೋ ಭಕ್ತರು ಮಾನವ ಸರಪಳಿ ನಿರ್ಮಿಸಿ ಕೆಲ ಹೊತ್ತು ಸಂಚಾರ ತಡೆ ನಡೆಸಿದರು.

ಚನ್ನಮ್ಮ ವೃತ್ತದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ಗೋಮಾತೆಯ ಕೆಚ್ಚಲು ಕೊಯ್ಯುವುದೆಂದರೆ ಅದು ಅಮಾನವೀಯ ಕೃತ್ಯ. ಗೋವನ್ನು ರಾಷ್ಟ್ರೀಯ ಆರೋಗ್ಯದ ಸಂಪತ್ತು ಎಂದು ಪರಿಗಣಿಸಲಾಗಿದೆ. ಆಕಳ ಪುಷ್ಟಿದಾಯಕ ಹಾಲನ್ನು ಕುಡಿದು ಸಮಸ್ತ ಮಾನವ ಕುಲ ಬೆಳೆಯುತ್ತದೆ. ವಿಶ್ವದ ಆರೋಗ್ಯಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತದೆ ಎಂದರು.

ಅಂತಹ ಗೋವಿನ ಕೆಚ್ಚಲು ಕೊಯ್ಯುವುದು ಎಂದರೆ ಮನುಷ್ಯತ್ವ ಇಲ್ಲದ ಮತಾಂಧತೆಯ ಸಂಕೇತವಿದು. ಇದು ಜಗತ್ತಿನ ಎಲ್ಲೂ ಅಗಬಾರದು. ಕುಡಿದ ಅಮಲಿನಲ್ಲಿ ಕತ್ತರಿಸಿದ್ದಾರೆ ಎನ್ನುವುದು ಅತಾರ್ಕಿಕ ವಿಚಾರ. ಸರ್ಕಾರ ಇದಕ್ಕೆ ಬೆಂಬಲ ಕೊಟ್ಟರೆ ಒಂದು ಜನಾಂಗದ ಭಾವನೆಗೆ ಧಕ್ಕೆ ತಂದಂತೆ. ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ದುರುಳರಿಗೆ ಸರ್ಕಾರ ಶಿಕ್ಷೆ ಕೊಡಬೇಕು. ಎಚ್ಚರಿಕೆ ಹೆಜ್ಜೆ ಇಟ್ಟು ಸರ್ಕಾರ ಜನರ ವಿಶ್ವಾಸ ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಗೋಸೇವಾ ಸಮಿತಿಯ ಭಾರತಿ ಪಾಟೀಲ ಮಾತನಾಡಿ, ಆಕಳು ನಮಗೆ ಪ್ರಾಣಿಯಲ್ಲ. ಸನಾತನ ಧರ್ಮದಲ್ಲಿ ಮಾತೃಸ್ಥಾನ ಕೊಟ್ಟಿದ್ದೇವೆ. ಗೋವಿನ ಮೇಲೆ ಅನೇಕ ಅತ್ಯಾಚಾರಗಳು ನಡೆಯುತ್ತಿವೆ. ಇತಿಹಾಸದಲ್ಲಿ ಈ ಮೊಲದು ಆಗಿಲ್ಲ. ಮುಂದೆ ಆಗಬಾರದು ಎಂದು ಆಗ್ರಹಿಸಿದರು.

ಮಾತಾ ಆಶ್ರಮದ ತೇಜೋಮಯಿ ಮಾತನಾಡಿ, ಇಂತಹ ಅಮಾನವೀಯ ಕೃತ್ಯ ಒಬ್ಬ ವ್ಯಕ್ತಿಯ ಕೀಳು ವಿಚಾರ. ದಯವಿಲ್ಲದ ಧರ್ಮ ಯಾವುದೂ ಇಲ್ಲ. ಇಂತಹ ಕೀಳು ಕೃತ್ಯ ಎಸಗಿದವರಿಗೆ ಯಾವ ಶಿಕ್ಷೆ ಆಗಿದೆ ಎಂಬುದು ಜನರಿಗೆ ತಿಳಿಯಪಡಿಸಬೇಕು. ನಾವು ಸನ್ಯಾಸಿಗಳು ಅಹಿಂಸೆ ಪರ ಇರುವುದು ನಿಜ. ಆದರೆ, ಹಿಂಸೆ ಜಾಸ್ತಿ ಆದಾಗ ಒಂದಿಷ್ಟು ಬುಸುಗುಡಲೇಬೇಕು ಎಂದು ಶ್ರೀರಾಮದೇವರು ಹೇಳಿದ್ದಾರೆ ಎಂದು ಪ್ರತಿಪಾದಿಸಿದರು.

ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಚಿನ್ಮಯ ಮಿಷನ್‌ ಸ್ವಾಮಿ ಕೃತಾರ್ಥಾನಂದಜೀ, ಇಸ್ಕಾನ್ ನ ರಾಮಗೋಪಾಲ ದಾಸ, ಡಾ. ವಿ.ಎಸ್.ವಿ. ಪ್ರಸಾದ. ವೆಂಕಟೇಶ ಕಾಟವೆ, ಸುಭಾಸಸಿಂಗ್ ಜಮಾದಾರ.

ಎ.ಸಿ. ಗೋಪಾಲ, ಗೋವರ್ಧನ ರಾವ, ಕಿರಣ ಗುಡ್ಡದಕೇರಿ, ಜಯತೀರ್ಥ ಕಟ್ಟಿ, ವಿಜಯ ಕ್ಷೀರಸಾಗರ, ವೀಣಾ ಹೆಗಡೆ, ಶಿವಾನಂದ ಸತ್ತಿಗೇರಿ, ದಾದಾಬಾಯಿ ಚೌಧರಿ, ಮಹೇಂದ್ರ ಪಾಲ್ಗೋತಾ, ರಮೇಶ್ ಕದಮ, ಸುನೀಲ ಕಟ್ಟಿಮನಿ, ಉಮೇಶ ದುಶಿ, ವಿರೇಶ ಸಂಗಳದ, ಶಿವಬಸು ಕೋರಿ, ಮೇರಾಜ, ಸಂಜೀವ ಬಡಸ್ಕರ್, ಸಂದೀಪ ಬೂದಿಹಾಳ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net