

ಹುಬ್ಬಳ್ಳಿ: ಗಾಂಧಿ ಕುಟುಂಬವನ್ನು ಗುರಿಯಾಗಿಸಿ ಕೇಂದ್ರದ ಬಿಜೆಪಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ವತಿಯಿಂದ ಶನಿವಾರ ಇಲ್ಲಿಯ ನವನಗರದ ಆದಾಯ ತೆರಿಗೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕಚೇರಿ ಗೇಟ್ ಬಳಿ ಪ್ರತಿಭಟನೆ ತೀವ್ರಗೊಂಡು ಆದಾಯ ತೆರಿಗೆ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಇಡಿ ಹಾಗೂ ಐಟಿ ಇಲಾಖೆಗಳು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಕೈಗೊಂಬೆಯಂತೆ ನಡೆದುಕೊಳ್ಳುತ್ತಿವೆ. ಅವರ ಅಣತಿಯಂತೆ ಗಾಂಧಿ ಕುಟುಂಬದವರ ಮೇಲೆ ಕೇಸ್ಗಳನ್ನು ಹಾಕಲಾಗುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಕೇಂದ್ರ ಸರ್ಕಾರದ ಈ ನಡೆಯನ್ನು ದೇಶಾದ್ಯಂತ ವಿರೋಧಿಸುತ್ತೇವೆ. ಇದರ ವಿರುದ್ಧ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಗುಡುಗಿದರು. ಕೆಲಕಾಲ ಗೇಟ್ ಬಳಿ ಧರಣಿ ನಡೆಸಿದರು.
ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ದೇಸಾಯಿ, ಜಿ.ಎಸ್. ಸುಜ್ಜಾದಿನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಜುನ ಪಾಟೀಲ, ಎನ್ಎಸ್ಯುಐ ಉಪಾಧ್ಯಕ್ಷ ಪ್ರಜ್ವಲ್ ಗೌಡರ, ಜಿಲ್ಲಾ ಉಪಾಧ್ಯಕ್ಷ ಕಾಸೀಮ್ ಕುಡಲಗಿ, ಮುಖಂಡರಾದ ಶಾನು ಖಾನ್, ಪ್ರೇಮ ಜಾಧವ, ನವನಗರ ಬ್ಲಾಕ್ನ ಅನಿಲ ಮಳಗಿ, ಚೇತನ ಶೀಗಳ್ಳಿ ಇತರರು ಪ್ರತಿಭಟನೆಯಲ್ಲಿದ್ದರು.