

ಚಿಕ್ಕಮಗಳೂರು: ಇಡೀ ದಕ್ಷಿಣ ಭಾರತದಲ್ಲಿ ಶೋಷಿತ ಹಾಗೂ ಎಲ್ಲ ಜನಸಮುದಾಯದ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ನಡೆಸುತ್ತಿರುವ ಪಿತೂರಿಯ ವಿರುದ್ಧ ಅ. ೭ರಂದು ಎಲ್ಲ ದಲಿತ, ಹಿಂದುಳಿದ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂಲಭೂತವಾದಿಗಳು ಕೇಂದ್ರ ಸರ್ಕಾರವನ್ನು ಬಳಸಿಕೊಂಡು ರಾಜ್ಯಪಾಲರ ಮೂಲಕ ನೋಟೀಸ್ ಕೊಡಿಸಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಅಸ್ತಿರಗೊಳಿಸಲು ನಡೆಸುತ್ತಿರುವ ಷಡ್ಯಂತ್ರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ೪೦ ವರ್ಷಗಳ ರಾಜಕೀಯ ಇತಿಹಾಸದಲ್ಲಿ ಭ್ರಷ್ಟಾಚಾರದ ಯಾವುದೇ ಕಪ್ಪುಚುಕ್ಕಿಯನ್ನು ತಮಗೆ ತಾಕಿಸಿಕೊಂಡಿಲ್ಲ. ಆದರೆ ಹಗರಣವೇ ಅಲ್ಲದ ಮುಡಾ ವಿಚಾರವನ್ನು ಮುಂದಿಟ್ಟುಕೊAಡು ಬಿಜೆಪಿ ಮತ್ತು ಜೆಡಿಎಸ್ ನವರು ಬೀದಿನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ನಡೆದಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಈಗಾಗಲೇ ತನಿಖಾ ತಂಡ ರಚಿಸಿ ಸಂವಿಧಾನ ಬದ್ಧವಾಗಿ ತನಿಖೆ ನಡೆಯುತ್ತಿದೆ. ಅದೇ ರೀತಿ ಮುಡಾ ನಿವೇಶನ ಹಂಚಿಕೆ ಬಗ್ಗೆ ಸಂಪೂರ್ಣ ದಾಖಲೆಗಳ ಸಹಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಹಾಗೂ ಮಾಧ್ಯಮಗಳ ಮೂಲಕ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಹೀಗಿದ್ದರೂ ಬಿಜೆಪಿ-ಜೆಡಿಎಸ್‌ನವರು ಪಾದಯಾತ್ರೆ ಮೂಲಕ ಬೀದಿ ರಂಪ ಮಾಡುತ್ತಿರುವುದು ಸಿದ್ದರಾಮಯ್ಯನವರ ರಾಜಕೀಯ ತೇಜೋವಧೆಯ ಕುತಂತ್ರ ಎಂದು ಹೇಳಿದರು.
ಎರಡು ಬಾರಿ ಮುಖ್ಯಮಂತ್ರಿಗಳಾಗಿ ಜನಪ್ರಿಯ ೧೫ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ತನ್ನ ರಾಜಕೀಯ ಜೀವನದಲ್ಲಿ ನಡೆದುಕೊಂಡು ಬಂದಿರುವ ರೀತಿ ತೆರೆದ ಪುಸ್ತಕವಾಗಿದೆ ಎಂದು ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ರಾಜ್ಯದ ಎಲ್ಲ ಜನರಿಗೆ ಅನುಕೂಲವಾಗುವಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಸಮಸ್ತ ಶೋಷಿತ ಜನರ ಪರವಾಗಿ ಇಡೀ ದಕ್ಷಿಣ ಭಾರತದಲ್ಲಿ ಏಕೈಕ ನಾಯಕರಾಗಿದ್ದಾರೆ. ಇವರನ್ನು ಕೆಳಗಿಳಿಸಲು ಮೂಲಭೂತವಾದಿಗಳು ಪಿತೂರಿ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿಯವರಿಗೆ ರಾಜ್ಯಪಾಲರು ನೋಟೀಸ್ ನೀಡಿರುವುದು ಅಸಂವಿಧಾನಿಕ ಹಾಗೂ ಕಾನೂನು ಬಾಹಿರವಾಗಿದೆ. ಈ ಕುರಿತು ದೂರು ನೀಡಿರುವ ದೂರುದಾರರ ಹಿನ್ನೆಲೆಯನ್ನು ಪರಿಶೀಲಿಸಬೇಕು. ಅದನ್ನು ಬಿಟ್ಟು ಏಕಾಏಕಿಯಾಗಿ ರಾಜ್ಯಪಾಲರು ನೋಟೀಸ್ ನೀಡಿರುವ ಕ್ರಮ ಸರಿಯಲ್ಲ ಎಂದು ಖಂಡಿಸಿದರು.
ಎಲ್ಲ ವರ್ಗದ ನಾಯಕರಾಗಿರುವ ಸಿದ್ದರಾಮಯ್ಯ ಅವರ ಪರವಾಗಿ ಇಡೀ ರಾಜ್ಯದ ಜನತೆ ಬೆಂಬಲಕ್ಕೆ ನಿಂತಿದ್ದಾರೆ. ಇಂತಹವರನ್ನು ಅಧಿಕಾರದಿಂದ ಇಳಿಸಲು ನಡೆಸುತ್ತಿರುವ ಪಿತೂರಿಯ ವಿರುದ್ಧ ಬುಧವಾರ ಸಹಸ್ರಾರು ಸಂಖ್ಯೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು, ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ತಾಲೂಕು ಕಚೇರಿಯಿಂದ ಮೆರವಣಿಗೆ ಹೊರಟು ಎಂ.ಜಿ ರಸ್ತೆ ಮೂಲಕ ಸಾಗಿ, ಆಜಾದ್ ಪಾರ್ಕ್ನಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಮಾತನಾಡಿ, ರಾಜ್ಯದ ಏಕೈಕ ಹಿಂದುಳಿದ ವರ್ಗಗಳ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುವ ಪ್ರಯತ್ನವನ್ನು ಬಿಜೆಪಿ-ಜೆಡಿಎಸ್ ನಡೆಸುತ್ತಿರುವುದು ಖಂಡನೀಯ. ಇವರ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಗೆ ಕಾರ್ಯಕರ್ತರು, ಸಾರ್ವಜನಿಕರು, ಮಹಿಳೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ ಮಂಜೇಗೌಡ, ಅಹಿಂದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಸಿ ಪುಟ್ಟೇಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ ಮಂಜುನಾಥ್, ನೇಕಾರ ಸಂಘದ ಅಧ್ಯಕ್ಷ ನಾರಾಯಣ, ಮಾದಿಗ ದಂಡೋರ ಸಮಿತಿ ಅಧ್ಯಕ್ಷ ರಮೇಶ್, ಮುಸ್ಲಿಂ ಧರ್ಮಗುರು ಔರಂಗ ಪಾಷ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ನಗರಸಭಾ ಸದಸ್ಯ ಮುನೀರ್, ಪರಮೇಶ್, ಮಲ್ಲೇಶ್‌ಸ್ವಾಮಿ, ಜೇಮ್ಸ್ ಡಿಸೋಜ ಮತ್ತಿತರರಿದ್ದರು.