

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಾಂಗ್ಲಾದೇಶದಲ್ಲಿ ಇಸ್ಕಾನ್ ಸಾಧು-ಸಂತರು ಹಾಗೂ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ವಿಶ್ವ ಹಿಂದು ಪರಿಷತ್, ಇಸ್ಕಾನ್ ಪದಾಧಿಕಾರಿಗಳು ಹಾಗೂ ಹಿಂದು ಪರ ಸಂಘಟನೆಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಕೆಸಿಸಿ ಬ್ಯಾಂಕ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜುಬಿಲಿ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ಕೆಲ ಹೊತ್ತು ಪ್ರತಿಭಟನೆ ನಡೆಸಿ ಬಾಂಗ್ಲಾದೇಶದ ಕ್ರಮ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಾಂಗ್ಲಾದಲ್ಲಿ ಹಿಂದುಗಳು ಹಾಗೂ ಇಸ್ಕಾನ್ ಸ್ವಾಮೀಜಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಅತ್ಯಂತ ಖಂಡನೀಯ. ಹಿಂದುಗಳು ಒಂದಾಗಿದ್ದರೆ ಯಾವ ಆಕ್ರಮಣಕಾರಿಗಳೂ ನಮ್ಮನ್ನು ಕಣ್ಣೆತ್ತಿ ಸಹ ನೋಡುವುದಿಲ್ಲ. ನಾವೆಲ್ಲ ಒಟ್ಟಾಗುವ ಮೂಲಕ ಇಂತಹ ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸಬೇಕಿದೆ. ಭಾರತ ಸರ್ಕಾರ ಬಾಂಗ್ಲಾದಲ್ಲಿರುವ ಹಿಂದುಗಳ ಮತ್ತು ಸ್ವಾಮೀಜಿಗಳ ರಕ್ಷಣೆಗೆ ಕೂಡಲೇ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಇಸ್ಕಾನ್ನ ಗರುಡಧ್ವಜ ಪ್ರಭು, ಸಾಧುಯೋಗಿ ಪ್ರಭು, ರಾಮಕೃಷ್ಣ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ, ವಿಶ್ವ ಹಿಂದು ಪರಿಷತ್ತಿನ ಡಾ. ಮಹೇಶ ಪಾಟೀಲ, ಬಸವರಾಜ ಕೌಜಲಗಿ, ಬಜರಂಗದಳದ ಸಂಯೋಜಕ ಶಿವಾನಂದ ಸತ್ತಿಗೇರಿ, ಅನುದೀಪ ಕುಲಕರ್ಣಿ, ಸಿದ್ದು ಹಿರೇಮಠ, ಗುರುಶಾಂತ ಹಿರೇಮಠ, ಶಂಕರ ಕೋಮಾರ ದೇಸಾಯಿ, ರಾಕೇಶ ನಾಝರೆ, ಸದಾನಂದ ಸುಲಾಕೆ, ಶರಣು ಅಂಗಡಿ, ಉದಯ ಯಂಡಿಗೇರಿ, ದೇವರಾಜ ಶಹಾಪುರ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಇತರರು ಇದ್ದರು.