ಅಂಜಲಿ ಹತ್ಯೆ ಖಂಡಿಸಿ ಪ್ರತಿಭಟನೆ

Shri Shantabhisma
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಯುವತಿ ಅಂಜಲಿ ಅಂಬಿಗೇರ ಕೊಲೆ ಖಂಡಿಸಿ ಮೇ 18ರಂದು ಬೆಳಗ್ಗೆ 10 ಗಂಟೆಗೆ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ನಗರದ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಅವರ ಮನೆಯಿಂದ ಪ್ರತಿಭಟನೆ ಆರಂಭಗೊಂಡು ಘಂಟಿಕೇರಿ ಓಣಿ, ಮಂಗಳವಾರಪೇಟೆ, ಶಾ ಬಜಾರ್, ದುರ್ಗದಬೈಲ್, ಶಹರ ಪೊಲೀಸ್ ಠಾಣೆ, ಮ್ಯಾದಾರ ಓಣಿ, ತುಳಜಾಭವಾನಿ ದೇವಸ್ಥಾನ, ದಾಜಿಬಾನಪೇಟೆ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಕಿತ್ತೂರು ಚನ್ನಮ್ಮ ವೃತ್ತ ತಲುಪಲಿದೆ. ಅಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಹಂತಕ ಪೀಡಿಸುತ್ತಿರುವ ಬಗ್ಗೆ ಅಂಜಲಿ ಅಂಬಿಗೇರ ಕುಟುಂಬದವರು ದೂರು ನೀಡಲು ಬಂದಾಗ ಪೊಲೀಸ್​ರು ನಿರ್ಲಕ್ಷ್ಯ ವಹಿಸಬಾರದಿತ್ತು. ನೇಹಾ ಹಿರೇಮಠ ರೀತಿಯಲ್ಲಿ ಹತ್ಯೆಗೈಯುವುದಾಗಿ ಹಂತಕ ಬೇದರಿಕೆ ಹಾಕಿರುವ ಬಗ್ಗೆ ತಿಳಿಸಿದರೂ ಪೊಲೀಸರು ಮೂಢನಂಬಿಕೆ ಎಂದು ವಾಪಸ್ ಕಳುಹಿಸಿದ್ದು ಸರಿಯಲ್ಲ. ಈಗ ಪೊಲೀಸರು ಹಂತಕನನ್ನು ಬಂಧಿಸಿದ್ದಾರೆ. ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಎನ್​ಕೌಂಟರ್ ಕಾನೂನು ಜಾರಿಗೆ ತರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಜಲಿ ಅಂಬಿಗೇರ ಕುಟುಂಬದವರು ಬಡವರಿದ್ದು ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ಒದಗಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಪರಮೇಶ್ವರ ಅಂಜಲಿ ಮನೆಗೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಬೇಕು. ಇಂಥ ಘಟನೆ ನಡೆಯದಂತೆ ಸರ್ಕಾರ ಕ್ರಮ ವಹಿಸಬೇಕು. ಮೃತಳ ಸಹೋದರಿಗೆ ಸರ್ಕಾರಿ ನೌಕರಿ ಕೊಡಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net