

ನಾಲತವಾಡ: ಹಲವಾರು ವರ್ಷಗಳಿಂದ ಅಂಗನವಾಡಿಗೆ ಗೈರಾಗುತ್ತಿರುವ ಕಾರ್ಯಕರ್ತೆ ನಮ್ಮೂರಿಗೆ ಬೇಡ ಎಂದು ಆಗ್ರಹಿಸಿ ಜೈನಾಪುರ ಗ್ರಾಮಸ್ಥರು ಅಂಗನವಾಡಿ ಎದುರು ಶುಕ್ರವಾರ ಪ್ರತಿಭಟಿಸಿದರು.
ಪ್ರತಿನಿತ್ಯ ಕೇಂದ್ರಕ್ಕೆ ಕಾರ್ಯಕರ್ತೆ ಒಂದಿಲ್ಲ ಒಂದು ನೆಪ ಹೇಳಿ ಮುದ್ದೇಬಿಹಾಳದಲ್ಲಿ ಕಾಲಹರಣ ಮಾಡುತ್ತಾರೆ. ಸಮಯಕ್ಕೆ ಸರಿಯಾಗಿ ಕೇಂದ್ರ ತೆರೆಯುತ್ತಿಲ್ಲ. ಮಕ್ಕಳ ಗತಿ ಏನು ಎಂದು ಪ್ರಶ್ನಿಸಿ ಆಕ್ರೋಶವ್ಯಕ್ತಪಡಿಸಿದ ಗ್ರಾಮಸ್ಥರು ಶುಕ್ರವಾರ ಏಕೆ ಕೇಂದ್ರದಲ್ಲಿ ಮಕ್ಕಳಿಲ್ಲ ಹಾಗೂ ಅಡುಗೆ ಏಕೆ ಸಿದ್ದಪಡಿಸಲಿಲ್ಲ ಎಂದು ಹರಿಹಾಯ್ದರು.
ಮಕ್ಕಳ ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರದ ವಿತರಣೆ, ಗರ್ಭಿಣಿಯರ ತಪಾಸಣೆಯನ್ನು ಈವರೆಗೂ ಸಮರ್ಪಕವಾಗಿ ನಡೆಸಿಲ್ಲ. ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದ ಶಿಕ್ಷಕವನ್ನು ನೀಡುತ್ತಿಲ್ಲ. ಇಲಾಖೆಯ ಮೇಲಧಿಕಾರಿಗಳು ಇವರ ಬೆಂಬಲಕ್ಕೆ ನಿಂತಿರುವ ಸಂಶಯವಿದೆ ಎಂದು ದೂರಿದರು.
ಸ್ಥಳೀಯರಾದ ವೀರೇಶ ಅಡಿಹಾಳ, ನಾಗಪ್ಪ ಪೂಜಾರಿ, ಬಸಪ್ಪ ಪೂಜಾರಿ, ಬಸವರಾಜ ಹವಾಲ್ದಾರ, ಮಲ್ಲಪ್ಪ ಪೂಜಾರಿ, ಹನಮಗೌಡ ಬಿರಾದಾರ, ಶರಣಗೌಡ ಬಿರಾದಾರ, ಜಿ.ಆರ್. ಪೂಜಾರಿ, ನಾಗಪ್ಪ ಪೂಜಾರಿ, ಮೌಲಾಲಿ ನಾಯ್ಕೋಡಿ ಎಚ್ಚರಿಸಿದ್ದಾರೆ.