ಆಂಧ್ರದ ವಿರೋಧ ಖಂಡಿಸಿ ಪ್ರತಿಭಟನೆ

CTD 8 STRIKE BADARA (1)-001
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಘೋಷಣೆಗೆ ಆಂಧ್ರ ಪ್ರದೇಶ ತಕರಾರು ತೆಗೆದಿರುವುದು ಸರಿಯಲ್ಲ ಎಂದು ಆರೋಪಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಡಿಸಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿತು.

ಆಂಧ್ರಪ್ರದೇಶದ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿದ ಸಮಿತಿ ಪ್ರಮುಖರು, ಬಚಾವತ್ ಹೈ ತೀರ್ಪು ಹಾಗೂ ನ್ಯಾಯಾಧೀಕರಣ ಅನ್ವಯ ಲಭ್ಯವಾದ 29,9 ಟಿಎಂಸಿ ಅಡಿ ನೀರನ್ನು ಬಳಸಿಕೊಂಡು ಭದ್ರಾ ಮೇಲ್ದಂಡೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಎಲ್ಲೂ ಕೂಡ ಆಂಧ್ರ ಸೇರಿ ಬೇರೆ ರಾಜ್ಯಗಳ ಪಾಲಿನ ನೀರು ಕಬಳಿಸುವ ಪ್ರಶ್ನೆಯೇ ಉದ್ಭವಿಸಿಲ್ಲ ಎಂದರು.

ಕಳೆದ ವರ್ಷ ಫೆ.15ರಂದು ಕೇಂದ್ರದ ಹೈ ಪವರ್ ಸ್ಟಿರಿಂಗ್ ಕಮಿಟಿ ಸಭೆಯಲ್ಲೇ ಆಂಧ್ರಪ್ರದೇಶ ಆಕ್ಷೇಪಗಳಿಗೆ ಕರ್ನಾಟಕ ಸರ್ಕಾರ ಉತ್ತರಿಸಿದ ನಂತರದಲ್ಲೇ ರಾಷ್ಟ್ರೀಯ ಯೋಜನೆ ಘೋಷಣೆ ಪ್ರಸ್ತಾವನೆ ಕೇಂದ್ರ ಸಂಪುಟದ ಮುಂದಿದೆ. ಭದ್ರಾದಡಿ ಬಯಲುಸೀಮೆಗೆ ಹಂಚಿಕೆಯಾದ 29.9 ಟಿಎಂಸಿ ಅಡಿ ನೀರನ್ನು ಈವರೆಗೂ ಬಳಸಿಕೊಳ್ಳಲು ಆಗಿಲ್ಲ.

ಪ್ರತಿ ವರ್ಷ 2-3 ಟಿಎಂಸಿ ಅಡಿ ನೀರು ಲಿಫ್ಟ್ ಮಾಡಿ ವಿ.ವಿ.ಸಾಗರಕ್ಕೆ ಹರಿಸಲಾಗಿದೆ. ಇನ್ನು 23 ಟಿಎಂಸಿ ಬಳಸಿಕೊಳ್ಳದೆ ಅದು ಆಂಧ್ರಪ್ರದೇಶಕ್ಕೆ ಹರಿದು ಹೋಗಿದೆ. ಗೋದಾವರಿಯಲ್ಲಿರುವ ಲಭ್ಯವಾಗಿರುವ ರಾಜ್ಯದ ಪಾಲಿನ ನೀರಿನಲ್ಲಿ ಜಗಳೂರಿಗೆ 2.4 ಟಿಎಂಸಿ ಹಂಚಿಕೆಯಾಗಿದೆ. ಯಾವುದೇ ಸತ್ಯಾಂಶಗಳಿಲ್ಲದೆ, ರಾಜಕಾರಣಕ್ಕಾಗಿ ಕ್ಯಾತೆ ತೆಗೆಯಲಾಗಿದೆ ಎಂದು ಆಂಧ್ರದ ನಡೆಗೆ ಹಾಗೂ 22 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗೆ ಬಜೆಟ್‌ನಲ್ಲಿ 5300 ಕೋಟಿ ರೂ. ಅಲ್ಪ ಅನುದಾನ ಘೋಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಅನುಷ್ಠಾನ ಸಮಿತಿ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ, ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ತಾಲೂಕಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮಲ್ಲಾಪುರ ತಿಪ್ಪೇಸ್ವಾಮಿ, ಜಿ.ಬಿ.ಶೇಖರ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಜೆ.ಯಾದವರೆಡ್ಡಿ, ಡಿ.ಮಲ್ಲಿಕಾರ್ಜುನ್, ರೇವಣಸಿದ್ದಪ್ಪ, ಕೆ.ಎಂ.ಮೋಹನ್‌ಕುಮಾರ್, ನವೀನ್, ಅಣ್ಣಪ್ಪ, ಡಿ.ಸಿ.ಲಕ್ಷ್ಮಣರೆಡ್ಡಿ, ಕೆ.ಎಂ.ಕಾಂತರಾಜ್,ಬಾಲರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net