ಕಾಂಗ್ರೆಸ್‌ನಿಂದ ಅಧಿಕಾರ ದುರ್ಬಳಕೆ ಆರೋಪ: ಪ್ರತಿಭಟನೆ

bjp
ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಎಸ್.ಎನ್.ಚನ್ನಬಸಪ್ಪ, ಅರ್.ಕೆ.ಸಿದ್ದರಾಮಣ್ಣ, ಮಾಲತೇಶ್, ಸುರೇಖಾ ಮರುಳೀಧರ್, ಜಗದೀಶ್, ದೀನದಯಾಳ್, ಮುರಳೀಧರ್ ಮತ್ತಿತರರಿದ್ದರು.
Published on

ಶಿವಮೊಗ್ಗ: ರಾಜ್ಯದಲ್ಲಿರುವುದು ಹಿಂದು ವಿರೋಧಿ ಸರ್ಕಾರ. ಅಭಿವೃದ್ಧಿ ಶೂನ್ಯ ಸರ್ಕಾರ. ಇದು ಗಣತಿಯ ಹೆಸರಿನಲ್ಲಿ ಹಿಂದು ಧರ್ಮವನ್ನು ಒಡೆಯಲು ಹೊರಟಿರುವ ಸರ್ಕಾರ. ಇದರ ವಿರುದ್ಧ ಬೀದಿ ಬೀದಿಯಲ್ಲಿ ಹೋರಾಟ ಅನಿವಾರ್ಯ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಗುಡುಗಿದರು.

ಜಿಲ್ಲಾ ಬಿಜೆಪಿಯಿಂದ ಬುಧವಾರ ನಗರದ ಮುಖ್ಯ ಬಸ್ ನಿಲ್ದಾಣದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಭಾರಿ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಅಹಂಕಾರ ಕಾಂಗ್ರೆಸ್‌ನವರಿಗಿದೆ. ಸಿಕ್ಕ ಆಡಳಿತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಿಎಂ ಹಾಗೂ ಡಿಸಿಎಂ ಒಂದೊಂದು ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಗಣಪತಿ ಹಬ್ಬಕ್ಕೆ ನೂರಾರು ಷರತ್ತುಗಳನ್ನು ವಿಧಿಸುವ, ಡಿಜೆ ನಿಷೇಧ ಮಾಡುವ ಸರ್ಕಾರ, ಈದ್ ಮಿಲಾದ್ ಮೆರವಣಿಗೆಯಲ್ಲಿ ನೂರಾರು ಡಿಜೆ ಹಾಕಿ ತಲ್ವಾರ್ ಪ್ರದರ್ಶಿಸಿದರೂ ಸುಮ್ಮನಿರುತ್ತದೆ. ಹಿಂದುಗಳ ಧಾರ್ಮಿಕ ಭಾವನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಮಾತನಾಡಿ, ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪದೇಪದೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಎಷ್ಟು ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂಬ ಬಗ್ಗೆ ಸಚಿವರು ಮಾಹಿತಿ ನೀಡಲಿ ಎಂದು ಸವಾಲು ಹಾಕಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಏನು ಪ್ರಶ್ನಿಸಿದರೂ ಉದ್ಧಟತನದ ಉತ್ತರ ನೀಡುತ್ತಾರೆ. ಮಳೆಯಿಂದ ಉಂಟಾಗಿರುವ ಬೆಳೆ ಹಾನಿಗೆ ಸರ್ಕಾರ ಪರಿಹಾರ ನೀಡಲಿ. ಗುಂಡಿಗಳಿಂದ ಕೂಡಿರುವ ರಸ್ತೆಗಳನ್ನು ರಿಪೇರಿ ಮಾಡಿಸಲಿ ಎಂದು ಒತ್ತಾಯಿಸಿದರು.

ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಪ್ರಮುಖರಾದ ಮಂಜುನಾಥ್, ದೀನದಯಾಳ್, ಹರೀಶ್, ರಾಮು, ಜ್ಞಾನೇಶ್ವರ್, ಅಣ್ಣಪ್ಪ, ಚಂದ್ರಶೇಖರ್, ಅನಿತಾ ರವಿಶಂಕರ್, ರಶ್ಮಿ ಶ್ರೀನಿವಾಸ್, ಸುರೇಖಾ ಮುರಳೀಧರ್, ಪ್ರಭಾಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net