ಕೃಷಿ ಪಂಪ್‌ಸೆಟ್‌ಗೆ ಆಧಾರ ಜೋಡಣೆ ವಿರೋಧಿಸಿ ಪ್ರತಿಭಟನೆ

SIRSI Strike
Published on

ಶಿರಸಿ: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ ಕಾರ್ಡ್ ಜೋಡಣೆ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ಇಲ್ಲಿಯ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರೈತ ಸಂಘದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಮಾತನಾಡಿ, ರೈತ ಬೆಳೆದ ಬೆಳೆಗಳಿಗೆ ಇದುವರೆಗೂ ವೈಜ್ಞಾನಿಕ ಬೆಲೆ ಲಭಿಸುತ್ತಿಲ್ಲ. ಸರ್ಕಾರ ರೈತರ ಕೃಷಿ ಪಂಪ್‌ಸೆಟ್ ಸಂಖ್ಯೆಗೆ ಆಧಾರ ಕಾರ್ಡ್ ಜೋಡಣೆ ಮಾಡುತ್ತಿದೆ. ಮೇಲ್ನೋಟಕ್ಕೆ ಇದೊಂದು ಸಹಜ ಎನಿಸಿದರೂ ಮುಂದಿನ ದಿನಗಳಲ್ಲಿ ಕೃಷಿ ಪಂಪ್‌ಗಳಿಗೆ ಗರಿಷ್ಠ ಬಳಕೆಯ ಯೂನಿಟ್ ನಿಗದಿಪಡಿಸುವ ಸಾಧ್ಯತೆ ಇದೆ. ವಿದ್ಯುತ್ ಬಿಲ್ ಭರಿಸಲಾಗದೇ ರೈತರು ಬೆಳೆ ಬೆಳೆಯಲೂ ಸಮಸ್ಯೆ ಎದುರಿಸಬೇಕಾಗಿ ಬರಲಿದೆ ಎಂದರು.

ಕೃಷಿ ಪಂಪ್‌ಸೆಟ್ ಹೊಂದಬೇಕೆಂದರೆ ಈಗ ವಿದ್ಯುತ್ ತಂತಿಯ ದರ, ಕಂಬ, ವಿದ್ಯುತ್ ವಿತರಕದ ಮೌಲ್ಯವನ್ನೂ ರೈತನೇ ತುಂಬಿಕೊಳ್ಳಬೇಕಾಗುತ್ತದೆ. ವಿವಿಧ ರೀತಿಯಲ್ಲಿ ರೈತರು ಸರ್ಕಾರಕ್ಕೆ ತೆರಿಗೆ ನೀಡಿದರೂ ಸರ್ಕಾರದಿಂದ ಆತ ಪಡೆಯುತ್ತಿರುವ ಸೌಲಭ್ಯ ಕಡಿಮೆ ಎಂದರು.

ಅಡಕೆಗೆ ಕೊಳೆ ರೋಗ ಬಂದು ಹಾನಿ ಆಗಿದೆ. ಸರ್ಕಾರ ಅಡಕೆಗೆ ಸಂಪೂರ್ಣ ವಿಮೆ ಒದಗಿಸಿ, ಪ್ಯಾಕೇಜ್ ಘೋಷಣೆ ಮಾಡಬೇಕು. ಭತ್ತ ಹೊರತುಪಡಿಸಿ ಎಲ್ಲ ಬೆಳೆ ಹಾನಿಯಾಗಿದೆ. ಗೋವಿನ ಜೋಳ ಹುಟ್ಟಿಯೇ ಇಲ್ಲ. ಈ ಕಷ್ಟ ಕಾಲದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು. ಬಳಿಕ ಹೆಸ್ಕಾಂ ಅಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ 10 ಎಚ್. ಪಿ.ವರೆಗಿನ ಕೃಷಿ ಪಂಪ್ ಸೆಟ್ ವರೆಗೆ ಮಾತ್ರ ಉಚಿತ ವಿದ್ಯುತ್ ಎಂಬ ನೀತಿಯನ್ನು ಬಿಟ್ಟು, ಎಲ್ಲ ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

ಪ್ರಮುಖರಾದ ಪ್ರಮೋದ ಜಕಲಣ್ಣನವರ್, ರವೀಂದ್ರ ನಾಯ್ಕ, ಮೋಹನ ದೊಡ್ಮನಿ, ಶಶಿಕುಮಾರ, ನಾಗರಾಜ ಡಾಂಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net