

ಕೊಳ್ಳೇಗಾಲ : ಆಸ್ತಿಯೊಂದರ ಖಾತೆ ಬದಲಾವಣೆ ವಿಳಂಬ ಖಂಡಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ನಗರಸಭೆ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಗಣೇಶ್ ಮಾತನಾಡಿ, ನನ್ನ ತಾಯಿ ಭಾಗ್ಯಾ ಅವರ ಹೆಸರಿನಿಂದ ನನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಸಲು ನಗರಸಭೆಗೆ ಮಾರ್ಚ್ ತಿಂಗಳಲ್ಲಿ ದಾಖಲೆಗಳನ್ನು ನಗರಸಭೆಗೆ ನೀಡಿದ್ದೇನೆ. ಆದರೆ, ಅಧಿಕಾರಿಗಳು ವಿಳಂಬ ಮಾಡಿದ್ದಕ್ಕೆ 2 ಭಾರಿ ಪ್ರತಿಭಟನೆ ನಡೆಸಿದ್ದೇವೆ, ಇದರ ಜತೆಗೆ ನೀರಿನ ಬಿಲ್, ಕಂದಾಯ ಕಟ್ಟಸಿಕೊಂಡರೂ ಸಾರ್ವಜನಿಕರಿಗೆ ನೀಡಬೇಕಾದ ಎ ಮತ್ತು ಬಿ ಖಾತೆಗಳ ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ ಸಾರ್ವಜನಿಕರು ಅಲೆದಾಡುತ್ತಿದ್ದಾರೆ ಎಂದರು.
ನನ್ನ ಸ್ವಂತದ ಖಾತೆ ಬದಲಾವಣೆ ವಿಚಾರವಾಗಿ ನನ್ನನ್ನು ಕಚೇರಿಗೆ ಅಲೆಸಿದ್ದಾರೆ. ನೀವು ಖಾಲಿ ನಿವೇಶನಕ್ಕೆ ತೆರಿಗೆ ಕಟ್ಟಿದ್ದೀರಿ, ಇದೀಗ ಮನೆಗೆ ಕಟ್ಟಿ ಎಂದು ಕೇಳುತ್ತಿದ್ದಾರೆ. ಖಾತೆ ಬದಲಾವಣೆ ಆಗದಿದ್ದರೆ ಸ್ಥಳ ಬಿಟ್ಟು ಕದಲುವುದಿಲ್ಲ. ಕೆಲಸ ಮಾಡದ ಅಧಿಕಾರಿಗಳಿಗೆ ಸನ್ಮಾನ ಮಾಡಲು ಸಜ್ಜಾಗಿದ್ದೇವೆ. ಸನ್ಮಾನ ಸ್ವೀಕರಿಸದಿದ್ದರೆ ಅವರ ಭಾವಚಿತ್ರಕ್ಕೆ ಸನ್ಮಾನ ಮಾಡುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಕೆ.ಆರ್.ಎಸ್.ಪಕ್ಷದ ತಾಲೂಕು ಅಧ್ಯಕ್ಷ ನವೀನ್, ಜಿಲ್ಲಾ ಕಾರ್ಯದರ್ಶಿ ಮಧುನಾಯಕ್, ಜಿಲ್ಲಾ ಕಾರ್ಯದರ್ಶಿ ಜಯಶಂಕರ್, ಶಿವಶಂಕರ್, ತಾಲೂಕು ಕಾರ್ಯದರ್ಶಿ ಕುಮಾರ್, ಚಂದ್ರಶೇಖರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಶಾಸ್ತ್ರೀ ಮತ್ತಿತರಿದ್ದರು.
ಪ್ರತಿಭಟನೆ ವಿಚಾರವಾಗಿ ನಗರಸಭೆ ಅಧ್ಯಕ್ಷ ಎ.ರಮೇಶ್ ಪ್ರತಿಕ್ರಿಯಿಸಿ, ಬಸ್ತೀಪುರದಲ್ಲಿರುವ ಭಾಗ್ಯಾ ಕೋಂ ಮಹದೇವಯ್ಯ ಅವರ ಅರ್ಜಿಗೆ ಸಂಬಂಧಿಸಿದಂತೆ ಮಾ.11 ರಲ್ಲಿ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಕೆಯಾಗಿದೆ. ಈ ವೇಳೆ ಖಾಲಿ ನಿವೇಶನ ಆಸ್ತಿ ಎಂದು ತೋರಿಸಲಾಗಿದೆ. ಆದರೆ, ಅಧಿಕಾರಿಗಳು ಪರಿಶೀಲಿಸಿದಾಗ ನಿವೇಶನದಲ್ಲಿ ಮನೆ ಕಟ್ಟಿರುವುದು ತಿಳಿದಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಂತೆ ಅವರು ನಿವೇಶನದಲ್ಲಿ ಮನೆ ಕಟ್ಟಿರುವ ಬಗ್ಗೆ ಘೋಷಿಸಿಕೊಳ್ಳದೆ ಖಾಲಿ ನಿವೇಶನ ಎಂದು ಘೋಷಿಸಿರುವುದು ತೆರಿಗೆಯನ್ನು ವಂಚಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಏ.19 ರಂದು ವ್ಯತ್ಯಾಸದ ಬಾಬ್ತು ಕಂದಾಯ ಕಟ್ಟುವಂತೆ ಹಿಂಬರಹ ನೀಡಲಾಗಿದೆ. ಅಂತೆಯೇ ಇಂದು ನಿವೇಶನ ಮತ್ತು ಮನೆ ನಿವೇಶನ ಸೇರಿಸಿ ತೆರಿಗೆ ಕಟ್ಟಿದ್ದರಿಂದ ಖಾತೆ ವಿತರಣೆ ಮಾಡಿದ್ದೇವೆ. ಶೇ.50ರಷ್ಟು ಮಾತ್ರ ನಗರಸಭೆ ಅಧಿಕಾರಿಗಳಿದ್ದಾರೆ. ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ. ಬಿ-ಖಾತೆ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದ್ದೇವೆ. ದಾಖಲೆಗಳನ್ನು ಪರಿಶೀಲಿಸಿ ಖಾತೆ ನೀಡಬೇಕಾಗುತ್ತದೆ. ಇನ್ನು 175 ಬಿ-ಖಾತೆ ಅರ್ಜಿ ಬಾಕಿ ಉಳಿದಿದೆ. ಮುಂದೆ ತ್ವರಿತವಾಗಿ ಈ ಅರ್ಜಿಗಳನ್ನು ವಿಲೇವಾರಿ ಮಾಡುತ್ತೇವೆ ಎಂದರು.
ತಪ್ಪು ಮಾಹಿತಿ ನೀಡಬೇಡಿ: ನಗಸರಭೆ ಅಧ್ಯಕ್ಷೆ ರೇಖಾ ರಮೇಶ್ ಮಾತನಾಡಿ, ಭಾಗ್ಯಾ ಎಂಬುವರ ಆಸ್ತಿಯ ಖಾತೆ ಬದಲಾವಣೆ ವಿಚಾರದಲ್ಲಿ ಅಧಿಕಾರಿಗಳಿಗೆ ಅರ್ಜಿದಾರರು ಮನೆ ನಿರ್ಮಿಸಿದ್ದರೂ ಖಾಲಿ ನಿವೇಶನ ಎಂದು ತಪ್ಪು ಮಾಹಿತಿ ನೀಡಿದ್ದರಿಂದ ಸಮಸ್ಯೆಯಾಗಿದೆ. ಮಾಹಿತಿ ಸರಿಯಾಗಿ ನೀಡಿದ್ದರೆ ಕೆಲಸ ಜರೂರಾಗಿ ಆಗುತ್ತಿತ್ತು. ಇದ್ದರಿಂದ ಅಧಿಕಾರಿಗಳು ಒತ್ತಡಕ್ಕೆ ಸಿಲುಕುವಂತೆ ಆಗಿದೆ ಎಂದರು.