

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿ ಇನ್ನಾ ಹಾಗೂ ಉಡುಪಿ, ದ.ಕ. ಜಿಲ್ಲೆಯ ಸಮಾನ ಮನಸ್ಕ ರೈತಪರ ಸಂಘ ಸಂಸ್ಥೆಗಳ ವತಿಯಿಂದ ಉದ್ದೇಶಿತ ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆ ಸಭೆ ಇನ್ನಾ ಗ್ರಾಪಂ ಮುಂಭಾಗ ಬುಧವಾರ ನಡೆಯಿತು.
ಹೋರಾಟ ಸಮಿತಿ ಪ್ರಮುಖರಾದ ಚಂದ್ರಹಾಸ್ ಶೆಟ್ಟಿ ಮಾತನಾಡಿ, ವಿದ್ಯುತ್ ಲೈನ್ ಹಾದು ಹೋಗುವ ಪರಿಣಾಮ ಕೃಷಿ ಭೂಮಿಗೆ ಹಾನಿಯಾಗುತ್ತಿದೆ. ಎರಡು ವರ್ಷಗಳಿಂದ ಸಮಸ್ಯೆ ಪರಿಹಾರವಾಗಿಲ್ಲ. ಅಧಿಕಾರಿಗಳು ಜಿಲ್ಲಾಧಿಕಾರಿ ಆದೇಶದ ಪ್ರತಿಯನ್ನು ಗ್ರಾಮಸ್ಥರಿಗೆ ತೋರಿಸದೆ ದಬ್ಬಾಳಿಕೆಯಿಂದ ಕಾಮಗಾರಿ ನಡೆಸುತ್ತಿದ್ದಾರೆ. 256 ಮನೆಗಳಿಗೆ ಸಮಸ್ಯೆಯಾಗುತ್ತಿದ್ದರೂ ಯಾರಿಗೂ ಮಾಹಿತಿಯಿಲ್ಲ. ಯಾವುದೇ ಮನೆಗೂ ನೋಟಿಸ್ ನೀಡಿಲ್ಲ. ಯಾವುದೇ ಅಧಿಕಾರಿಗಳ ಸಹಿ ಇಲ್ಲದೆ ಬರೀ ಕಂಪನಿ ಸಿಬ್ಬಂದಿ ಸಹಿಯಿರುವ ನೋಟಿಸ್ ನೀಡುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ? ಎಂದು ಗ್ರಾಮಸ್ಥರ ಪರವಾಗಿ ಆರೋಪಿಸಿದರು.
ರೈತ ಸಂಘದ ಶ್ರೀಧರ್ ಶೆಟ್ಟಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈ ವಿದ್ಯುತ್ ಲೈನ್ ಹಾದು ಹೋಗುವುದರಿಂದ ಇಲ್ಲಿಗೆ ಯಾವುದೇ ಪ್ರಯೋಜನವಿಲ್ಲ. ಯಾವುದೋ ರಾಜ್ಯದ ಉದ್ಧಾರಕ್ಕೆ ನಮ್ಮ ರಾಜ್ಯದ ಕೃಷಿ ಭೂಮಿ ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ, ಮುಂದೆ ಹಿಂಸೆ ಹಾಗೂ ಅಹಿಂಸೆಯ ಹೋರಾಟದ ಅಗತ್ಯವಿದೆ. ಗ್ರಾಮದ ಜನ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ. ಅಧಿಕಾರಿಗಳು ಕಂಪನಿ ಏಜೆಂಟ್‌ಗಳಾಗುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳ್ಮಣ್ ಸುವರ್ಣ ಕಾರಿಡಾರ್ ಯೋಜನೆ ಹಾಗೂ ಟೋಲ್ ಗೇಟ್ ವಿರೋಧ ಸಮಿತಿ ಪ್ರಮುಖರಾದ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿದರು.
ಇನ್ನಾ ಗ್ರಾಪಂ ಅಧ್ಯಕ್ಷೆ ಸರಿತಾ ಶೆಟ್ಟಿ, ಐಕಳ ಗ್ರಾಪಂ ಅಧ್ಯಕ್ಷ ದಿವಾಕರ್ ಚೌಟ, ಪ್ರೇಮಾನಂದ ದೇವಾಡಿಗ, ದೀಪಕ್ ಕೋಟ್ಯಾನ್, ಹೋರಾಟ ಸಮಿತಿ ಅಧ್ಯಕ್ಷ ಅಮರನಾಥ ಶೆಟ್ಟಿ, ಪ್ರವೀಣ್ ಶೆಟ್ಟಿ, ಇನ್ನದಗುತ್ತು ಶಂಕರ ಶೆಟ್ಟಿ, ಮೊದಿನಬ್ಬ, ಜಯ ಎಸ್.ಕೋಟ್ಯಾನ್, ನವೀನ್ ನಾಯಕ್, ಪಡುಬಿದ್ರಿ ನವೀನಚಂದ್ರ ಶೆಟ್ಟಿ, ಪಲಿಮಾರು ನವೀನಚಂದ್ರ ಸುವರ್ಣ, ಸದಾಶಿವ ದೇವಾಡಿಗ, ಬೋಳ ಸತೀಶ್ ಪೂಜಾರಿ, ಜಯರಾಮ ಸಾಲ್ಯಾನ್, ಸಚ್ಚರಪರಾರಿ ಸುಬೋಧ ಶೆಟ್ಟಿ, ಕೋರಿಬೆಟ್ಟುಗುತ್ತು ಸುರೇಂದ್ರ ಶೆಟ್ಟಿ, ಲಕ್ಷಣ್ ಶೆಟ್ಟಿ ನಂದಿಕೂರು, ಮುಲ್ಲಡ್ಕ ಪರಾರಿ ರವೀಂದ್ರ ಶೆಟ್ಟಿ, ಸತ್ಯಶಂಕರ ಶೆಟ್ಟಿ, ಸಂದೀಪ್ ಶೆಟ್ಟಿ, ದಿನೇಶ್ ಕೋಟ್ಯಾನ್, ಏಳಿಂಜೆ ಕೌಶಲ್ಯ ಶೆಟ್ಟಿ, ಸುಧಾಕರ ಸಾಲ್ಯಾನ್, ಸುಖೇಶ್ ಶೆಟ್ಟಿ, ಉಡುಪಿ ಜಿಲ್ಲಾ ಕಿಸಾನ್ ಸಂಘದ ಶಶಿಧರ ಶೆಟ್ಟಿ, ಭಾಕಿಸಂನ ನವೀನಚಂದ್ರ ಜೈನ್, ಗೋವಿಂದರಾಜ ಭಟ್, ಶಂಕರ ಶೆಟ್ಟಿ, ಮುಂಡ್ಕೂರು ವಾದಿರಾಜ ಶೆಟ್ಟಿ, ಸಿಲ್ವೆಸ್ಟರ್ ಡಿಮೆಲ್ಲೊ, ಸೂರ್ಯಕಾಂತ ಶೆಟ್ಟಿ, ದೇವೇಂದ್ರ ಶೆಟ್ಟಿ, ಸರ್ವಜ್ಞ ತಂತ್ರಿ, ದೀಪಕ್ ಕಾಮತ್ ಮತ್ತಿತರಿದ್ದರು.
ದ.ಕ. ಜಿಲ್ಲೆಯ ವಿಟ್ಲ, ಮೂಡುಬಿದಿರೆ, ಬಂಟ್ವಾಳ ಮತ್ತಿತರ ಕಡೆಗಳಿಂದ ರೈತ ಸಂಘಗಳ ಪ್ರಮುಖರು, ಸದಸ್ಯರು ಆಗಮಿಸಿ ಪ್ರತಿಭಟನಾಕಾರರಿಗೆ ಪ್ರೇರಣೆ ನೀಡಿದರು. ದ.ಕ. ಜಿಲ್ಲಾ ಕಿಸಾನ್ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಮನೋಹರ್ ಶೆಟ್ಟಿ, ರಾಜು ಗೌಡ ರೈತರ ಪರ ಮಾತನಾಡಿದರು. ಉಭಯ ಜಿಲ್ಲೆಗಳ ಭಾರತೀಯ ಕಿಸಾನ್ ಸಂಘ, ಹಸಿರು ಸೇನೆ ನಾಯಕರು, ಶಾಸಕರು, ಸಂಸದರು, ಮಾಜಿ ಸಚಿವರು, ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಕೃಷಿಕರು, ಸಾರ್ವಜನಿಕರು ಭಾಗವಹಿಸಿದ್ದರು.
ಯೋಜನೆ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಜಿಲ್ಲಾಧಿಕಾರಿ ಸ್ಪಂದಿಸಲಿಲ್ಲ. ರೈತರ ಕಷ್ಟ ಕೇಳಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳೇ ಬಂದು ಉತ್ತರ ನೀಡುವವರೆಗೆ ಪ್ರತಿಭಟನಾ ಸ್ಥಳದಿಂದ ಏಳುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದರು. ಸಂಜೆ ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಭೇಟಿ ನೀಡಿದರು. ಈ ಸಂದರ್ಭ ಗ್ರಾಮಸ್ಥರು ಮನವಿ ಸಲ್ಲಿಸಿದರು. ಕಾರ್ಕಳ ತಹಸೀಲ್ದಾರ್ ನರಸಪ್ಪ ಅವರಿಗೂ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ತನ್ನ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಕಾರ್ಕಳ ತಹಸೀಲ್ದಾರ್‌ಗೆ ತಿಳಿಸಿದರು.
ಜನವಿರೋಧಿ ಯೋಜನೆಗಳಿಗೆ ಯಾವತ್ತೂ ಬೆಂಬಲ ಇಲ್ಲ. ಈ ದೇಶದ ಜನರು ರೈತರನ್ನು ನಂಬಿ ಬದುಕುವವರು. ಹೀಗಾಗಿ ಅವರನ್ನು ಬದುಕಲು ಬಿಡಿ. ಕೃಷಿಕರ ಬದುಕಿನೊಡನೆ ಚೆಲ್ಲಾಟ ಬೇಡ. ಅತಿ ಶೀಘ್ರ ಇಂಧನ ಸಚಿವ ಕೆ.ಜೆ.ಜಾರ್ಜ್ ಜತೆ ಮಾತುಕತೆ ನಡೆಸಿ ಪರಿಸ್ಥಿತಿ ಪರಿಶೀಲಿಸಿ ಕೃಷಿಕರಿಗೆ ತೊಂದರೆಯಾಗುವುದಿದ್ದರೆ ಖಂಡಿತಾ ಕೃಷಿಕರ ಪರವಾಗಿ ನಿಲ್ಲುತ್ತೇನೆ.-ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲಾ ಉಸ್ತುವಾರಿ ಸಚಿವೆ
ಅಭಿವೃದ್ಧಿ ಯೋಜನೆ ಜನರ ಅಭಿಪ್ರಾಯ ಧಿಕ್ಕರಿಸಿ, ವಿರೋಧಿಸಿ ನಡೆಯಬಾರದು ಎನ್ನುವ ಸದಾಭಿಪ್ರಾಯ ನನ್ನದು. ನಾನು ಇಂಧನ ಮಂತ್ರಿಯಾಗಿದ್ದ ಸಂದರ್ಭ ಯೋಜನೆ ಜಾರಿಗೊಳಿಸುವ ಪ್ರಯತ್ನ ನಡೆದಿತ್ತು. ಆ ಸಂದರ್ಭ ಬಂಟ್ವಾಳದಲ್ಲಿ ದೊಡ್ಡ ಹೋರಾಟ ನಡೆದಾಗ ಜನವಿರೋಧದ ನಡುವೆ ಯೋಜನೆ ರೂಪಿಸಬಾರದು ಎಂದು ಆಗ್ರಹಿಸಿದ್ದೆ. ಜನವಿರೋಧದ ನಡುವೆ ಪೊಲೀಸ್ ಬಂದೋಬಸ್ತಿನಲ್ಲಿ ಯಾವುದೇ ಯೋಜನೆ ಮಾಡಿದರೆ ಅದು ಅನಾಹುತಕ್ಕೆ ಕಾರಣವಾಗುತ್ತದೆ. ಇದಕ್ಕೆ ಜಿಲ್ಲಾಡಳಿತ ಮುಂದಾಗಬಾರದು.-ವಿ.ಸುನೀಲ್ ಕುಮಾರ್, ಕಾರ್ಕಳ ಶಾಸಕ