

ಜಮಖಂಡಿ: ಶೂರಪಾಲಿ ಪುನರ್ವಸತಿ ಕೇಂದ್ರದಲ್ಲಿ ಕುಡಿಯುವ ನೀರು ಸೇರಿ ಮೂಲಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸ್ಥಳೀಯರು ಶೂರಪಾಲಿ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಮಹಿಳೆಯರು ಖಾಲಿ ಕೊಡಗಳ ಹಿಡಿದುಕೊಂಡು ಗ್ರಾಪಂಗೆ ಆಗಮಿಸಿ, ಕುಡಿಯುವ ನೀರಿಗಾಗಿ ಅಲೆದಾಡುವಂತ ಸ್ಥಿತಿ ಇದೆ. ಬೇಸಿಗೆಯಲ್ಲಿ ಹನಿ ನೀರಿಗಾಗಿ ನಾವು ಪರದಾಡುವಂತಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಸಲ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಚ್ಛತಾ ಕಾರ್ಯ ಮಾಡುತ್ತಿಲ್ಲ. ಬೀದಿ ದೀಪಗಳು ಇಲ್ಲ. ಮಳೆಗಾಲದಲ್ಲಿ ಪ್ರವಾಹ ಉಂಟಾದಾಗ ಇದೇ ಅಧಿಕಾರಿಗಳು ಬಂದು ಪುನರ್ವಸತಿ ಕೇಂದ್ರಕ್ಕೆ ಎದ್ದೋಗಿ ಅಂತಾರೆ. ಆದರೆ, ಬೆಸಿಗೆಯಲ್ಲಿ ಕುಡಿಯಲು ನೀರು ಕೊಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶೂರಪಾಲಿ ಪುನರ್ವಸತಿ ಕೇಂದ್ರ ತುಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ ಎನ್ನುತ್ತಾರೆ. ಆದರೆ ಅವರು ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲ್ಲಿನ ಅಧಿಕಾರಿಗಳು ಜನಪ್ರತಿನಿಧಿಗಳು ನಮಗೆ ನ್ಯಾಯ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಕಳೆದ ಐದು ದಿನಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದೇವೆ ಯಾರೂ ನಮ್ಮ ಸಂಕಷ್ಟಕ್ಕೆ ಸ್ಪಂದಿಸುತಿಲ್ಲ ಎಂದು ಆರೋಪಿಸಿದರು.
ನಿಂಗಪ್ಪ ಬಳೊಲ, ಸುರೇಶ ಕಣಬೂರ, ಸೈದುಸಾಬ ನದ್ಾ, ಚೆನ್ನಪ್ಪ ಕಣಬೂರ, ಪಡೆಪ್ಪ ಸಿಂಗಾಡಿ, ರಮೇಶ ಕುಂಚನೂರ, ಭೀಮಪ್ಪ ಕಂದಾರೆ, ಬಸವರಾಜ್ ಕಣಬೂರ, ಪರಸಪ್ಪ ದಡ್ಡಿಮನಿ ಇತರರು ಇದ್ದರು.
ಶೂರಪಾಲಿ ಪುನರ್ವಸತಿ ಕೇಂದ್ರ ತುಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಅಲ್ಲಿನವರು ಸೌಲಭ್ಯ ಒದಗಿಸಬೇಕು. ಅಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಪಿಡಿಒ ಹಣಮಂತ ಕರ್ಣಕೋಟೆ ಪ್ರತಿಭಟನಾಕಾರರಿಗೆ ತಿಳಿಸಿದರು.