ರಸ್ತೆ ದುರಸ್ತಿಗೆ ಆಗ್ರಹಿಸಿ ಗಾಳಿಬೀಡಿನಲ್ಲಿ ಪ್ರತಿಭಟನೆ

protest
Published on

ಮಡಿಕೇರಿ:

ಸಂಪೂರ್ಣ ಹಾಳಾಗಿರುವ ಮಡಿಕೇರಿ ತಾಲೂಕು ಗಾಳಿಬೀಡು-ಕಾಲೂರು ಮುಖ್ಯ ರಸ್ತೆಯನ್ನು ತಕ್ಷಣ ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ಗಾಳಿಬೀಡು, ಕೋಳಿಗೂಡು, ವಣಚಲು, ಕಾಲೂರು, ಕೂಟುಹೊಳೆ, ಕೆ.ನಿಡುಗಣೆ ಹಾಗೂ ಹೆಬ್ಬೆಟ್ಟಗೇರಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಗಿರೀಶ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಳಪೆ ಕಾಮಗಾರಿ ಮೂಲಕ ಗುಂಡಿ ಬಿದ್ದ ರಸ್ತೆಯನ್ನು ಮುಚ್ಚಲಾಗುತ್ತಿದೆ. ಇದರ ಬದಲು ನೂತನ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಗಿರೀಶ್, ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮಾರ್ಚ್ ಅಂತ್ಯದೊಳಗೆ ರಸ್ತೆ ದುರಸ್ತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದಿದ್ದಲ್ಲಿ ಮತ್ತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ ಗ್ರಾಮಸ್ಥರು, ಪ್ರತಿಭಟನೆಯನ್ನು ಸದ್ಯದ ಮಟ್ಟಿಗೆ ವಾಪಸ್ ತೆಗೆದುಕೊಂಡರು.

ಸ್ಥಳೀಯರಾದ ನವೀನ್ ದೇರಳ. ಪಾಂಡೀರ ಸುಬ್ರಮಣಿ, ಹರೀಶ ರೈ, ಶಿವಪ್ರಸಾದ್ ರೈ, ಯು.ಎಸ್.ಗಿರೀಶ್, ಯಾಲದಾಳು ರಾಜಶೇಖರ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ನಾಗೇಶ್ ಕುಂದಲ್ಪಾಡಿ, ಕುಕ್ಕೇರ ಅಜಿತ್ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net