ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಬೇಡ ಟ್ರ್ಯಾಕ್ಟರ್, ಬೆಳೆ ಸಮೇತ ರೈತ ಸಂಘ ಪ್ರತಿಭಟನೆ

23-klr-1
Published on

ಕೋಲಾರ: ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಒತ್ತಾಯ ಪೂರ್ವಕ ವಸೂಲಿಗೆ ಆದೇಶಿಸದಂತೆ ರೈತ ಸಂಘದಿಂದ ಕೆಎಸ್‌ಎರ್‌ಟಿಸಿ ಬಸ್‌ನಿಲ್ದಾಣ ವೃತ್ತದಲ್ಲಿ ಟ್ರ್ಯಾಕ್ಟರ್ ಹಾಗೂ ಬೆಳೆ ಸಮೇತ ಗುರುವಾರ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ರಾಜ್ಯದಲ್ಲಿ ತೀವ್ರ ಬರಗಾಲದ ಜತೆಗೆ ಅತಿವೃಷ್ಟಿ ಹಾಗೂ ಅನವೃಷ್ಟಿಯಿಂದ ರೈತರು ತತ್ತರಿಸಿದ್ದಾರೆ. ಜಿಲ್ಲೆಯಲ್ಲಿ ಬೆಳೆಗಳು ಊಜಿ ಹಾಗೂ ಅಂಗಮಾರಿ ರೋಗದಿಂದ ನಾಶವಾಗಿ ರೈತ ಸಾಲದ ಸುಳಿಗೆ ಸಿಲುಕಿದ್ದಾನೆ. ಇಂತಹ ಸಂದರ್ಭದಲ್ಲಿ ರೈತರ ಪರ ಇರಬೇಕಾದ ಸರ್ಕಾರ ಸಾಲ ವಸೂಲಾತಿಗೆ ಆದೇಶಿಸಿ ಆತಂಕಕ್ಕೆ ದೂಡಿದೆ. ಪ್ರಸ್ತುತ ಸರ್ಕಾರ ಆದೇಶ ವಾಪಸ್ ಪಡೆದಿದ್ದರೂ ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಆದೇಶ ಹೊರಡಿಸಬಾರದು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಬೆಳೆಗೆ ಸೂಕ್ತ ಬೆಲೆ ನೀಡುವ ಡಾ. ಸ್ವಾಮಿನಾಥನ್ ವರದಿ ಜಾರಿ ಮಾಡುವುದು ಬಿಟ್ಟು ದೌರ್ಜನ್ಯದಿಂದ ಸಾಲ ವಸೂಲಿ ಮಾಡಲು ಬಂದರೆ ಹೋರಾಟದ ಸ್ವರೂಪ ಬದಲಿಸಬೇಕಾದೀತು ಎಂದು ಎಚ್ಚರಿಸಿದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಅಂಬಾಜಿ ವರ್ಮನ್ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರಲ್ಲದೆ ಒತ್ತಾಯಪೂರ್ವಕವಾಗಿ ಸಾಲ ವಸೂಲಿ, ಆಸ್ತಿ ಜಪ್ತಿ ಮಾಡುವ ಕುರಿತು ಸರ್ಕಾರಿದಂದ ಯಾವುದೇ ಲಿಖಿತ ಆದೇಶ ಬಂದಿಲ್ಲ. ಯಾವುದೇ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಿಗೆ ಮನೆ ಬಾಗಿಲಿಗೆ ಬಂದರೆ ಲೀಡ್ ಬ್ಯಾಂಕ್ ಸಂಪರ್ಕಿಸುವಂತೆ ತಿಳಿಸಿದರು.

ಮುಖಂಡರಾದ ಉಮಾಗೌಡ. ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಸಹದೇವಪ್ಪ, ನಾಗೇಶ್, ಫಾರುಕ್‌ಪಾಷಾ, ಈಕಂಬಳ್ಳಿ ಮಂಜುನಾಥ, ತೆರ‌್ನಹಳ್ಳಿ ಆಂಜಿನಪ್ಪ, ಹೊಸಹಳ್ಳಿ ವೆಂಕಟೇಶ್, ಪ್ರತಾಪ್, ವಡ್ಡಹಳ್ಳಿ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net