

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯಾದ್ಯಂತ ವಕ್ಫ ಆಸ್ತಿ ವಿವಾದ ಅಕ್ರೋಶದ ಕಿಡಿಹೊತ್ತಿಸಿದ್ದು, ಗ್ರಾಮಾಂತರ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ, ದೊಡ್ಡಬಳ್ಳಾಪುರ, ಆನೇಕಲ್, ಹೊಸಕೋಟೆ ಸೇರಿ ವಿವಿಧ ತಾಲೂಕು ಕೇಂದ್ರಗಳಲ್ಲಿ ವಿವಿಧ ಸಂಘಟನೆಗಳು ಸರ್ಕಾರ ವಿರುದ್ಧ ಕಿಡಿಕಾರಿದ್ದು, ಒಂದು ಕೋಮಿನ ಓಲೈಕೆಗಾಗಿ ರಾಜ್ಯದ ರೈತ ಸಮುದಾಯವನ್ನು ನಾಶ ಮಾಡಲು ಹೊರಟಿರುವ ಸರ್ಕಾರದ ನಡೆ ವಿರುದ್ಧ ಸಾರ್ವಜನಿಕ ವಲಯದಲ್ಲ ತೀವ್ರ ಅಸಮಾಧಾನ ಹೊರಬಿದ್ದಿದೆ.
ರೈತರ ಜಮೀನುಗಳ ಪಹಣಿಯಲ್ಲಿ ಏಕಾಏಕಿ ವಕ್ಫ ಆಸ್ತಿ ಉಲ್ಲೇಖ ಕಂಡುಬರುತ್ತಿದೆ ಎನ್ನಲಾಗಿದ್ದು, ಆತಂಕಗೊಂಡಿರುವ ರೈತರು ತಮ್ಮ ಜಮೀನುಗಳ ಪಹಣಿಗಳ ಪರಿಶೀಲನೆಗೆ ಮುಗಿಬಿದ್ದಿದ್ದಾರೆ. ್ರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತುಘಲಕ್ ನೀತಿ ಅನುಸರಿಸಲು ಮುಂದಾಗಿದೆ. ಸಚಿವ ಜಮೀರ್ ಅಹಮದ್ ಸೂಚನೆಯಂತೆ ಜಿಲ್ಲಾಧಿಕಾರಿಗಳಿಗೆ ಒತ್ತಡ ಬರುತ್ತಿದೆ, ಇದರಿಂದ ಗ್ರಾಮಾಂತರ ಜಿಲ್ಲೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ, ಜಿಲ್ಲೆಯಲ್ಲಿ ರೈತರ ಜಮೀನು ಕಬಳಿಸಲು ಹುನ್ನಾರ ನಡೆಯುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದ್ದಾರೆ.