

ವಿಜಯವಾಣಿ ಸುದ್ದಿಜಾಲ ನಂದಗುಡಿ
ಶಾಸಕರಿಗೆ ಅಧಿಕಾರ ಮುಖ್ಯವಲ್ಲ, ಬೀದಿಗಳಿದು ರೈತರ ಜತೆ ಕೈ ಜೋಡಿಸಿದರೆ ನೀವು ಜನಪ್ರತಿನಿಧಿಯಾಗಿದಕ್ಕೆ ಸಾರ್ಥಕವಾಗುತ್ತದೆ. ಪತ್ರಿಕೆಗಳಲ್ಲಿ ಬೆಂಬಲ ನೀಡುವುದಾಗಿ ಹೇಳಿ ಯಾರ ಜತೆಗೊ ಎಲ್ಲಿಗೂ ಓಡಿ ಹೋಗುವುದಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸ್ಥಳೀಯ ಶಾಸಕರಿಗೆ ಸವಾಲು ಹಾಕಿದರು.
ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ಮಂಗಳವಾರ ಭೂ ಸ್ವಾಧೀನ ವಿರೋಧಿ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ರೈತ ಶಕ್ತಿಯೇ ಜನಶಕ್ತಿ ಹೊಸಕೋಟೆ ತಾಲೂಕಿನ ಶಾಸಕರಿಗೂ ಮುಂದಿನ ಚುನಾವಣೆಗೆ ಎಚ್ಚರಿಕೆ ವಹಿಸಬೇಕಾಗುತ್ತೆ, ರೈತರ ಜತೆ ಕೈ ಜೋಡಿಸದೇ ಹೋದ ಪಕ್ಷದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತೆ. ಮುಂದಿನ ಚುನಾವಣೆಯಲ್ಲಿ ಮಾಜಿ ಶಾಸಕರಾಗಬೇಕಾಗುತ್ತದೆ. ಇದು ಅವರಿಗೆ ಕೊನೆ ಎಚ್ಚರಿಕೆಯಾಗಿದೆ. ನಂದಗುಡಿ ಟೌನ್‌ಶಿಪ್‌ಗೆ ಸರ್ಕಾರ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿಯ 36 ಗ್ರಾಮಗಳ 18,500 ಎಕರೆ ಫಲವತ್ತಾದ ಭೂಮಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿರುವುದನ್ನು ಸರ್ಕಾರ ಹಿಂಪಡೆಯಬೇಕು ಎಂದರು.
ದುಷ್ಟರನ್ನು ಸಿಎಂ ದೂರವಿಡಬೇಕು: ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸುತ್ತ ಇರುವ ದುಷ್ಟರನ್ನು ದೂರ ಇರಿಸುವ ಕೆಲಸ ಮಾಡಬೇಕು. ಅಲ್ಲದೆ ನಂದಗುಡಿ ಟೌನ್‌ಶಿಪ್‌ಅನ್ನು ಕೈ ಬಿಡುವ ಮೂಲಕ ರೈತ ಪರವಾಗಿದ್ದೇವೆ ಎಂದು ಸಾಬೀತು ಮಾಡಬೇಕು ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಹೇಳಿದರು. ಯಾವುದೇ ಸರ್ಕಾರ ರೈತರಿಂದ ಬಲವಂತವಾಗಿ ಭೂಮಿ ಕಸಿದುಕೊಳ್ಳಲು ಬಿಡುವುದಿಲ್ಲ. ರಾಜ್ಯ ಸರ್ಕಾರ ಸಂವಿಧಾನದ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದು, ಸಂವಿಧಾನದ ಮೇಲೆ ಗೌರವವೇ ಇಲ್ಲದಂತಾಗಿದೆ. 18 ವರ್ಷದಿಂದ ತೆರೆಮರೆಯಲ್ಲಿದ್ದ ಉಪನಗರ ನಿರ್ಮಾಣದ ಯೋಜನೆ ಕೈಗೆತ್ತಿಕೊಂಡು ರೈತರ ಯಾವುದೇ ಅನುಮತಿ ಇಲ್ಲದೆ ಟೌನ್ ಶಿಪ್ ಮಾಡಲು ಹೋಗುತ್ತಿರುವುದು ಪ್ರಜಾಪ್ರಭುತ್ವದ ವಿರೋಧಿ ಕೆಲಸವಾಗಿದೆ ಎಂದರು.