

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕರ್ತವ್ಯದಲ್ಲಿರುವಾಗಲೇ ಕೊಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಅಮಾನವೀಯ ಪ್ರಕರಣ ಖಂಡಿಸಿ ವೈದ್ಯ ಸಮೂಹ ಕರೆ ನೀಡಿದ್ದ ಹೋರಾಟಕ್ಕೆ ಶನಿವಾರ ಜಿಲ್ಲಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ವೈದ್ಯ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.
ಕೆಲವು ಕಡೆಗಳಲ್ಲಿ ಮುಂಜಾನೆ ಹೊರರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ನೀಡದೆ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಮನವಿ ಮೇರೆಗೆ ಮಧ್ಯಾಹ್ನದ ಬಳಿಕ ಕಪ್ಪುಪಟ್ಟಿಯೊಂದಿಗೆ ಹೊರರೋಗಿಗಳಿಗೆ ಚಿಕಿತ್ಸಾ ಸೌಲಭ್ಯಕ್ಕೆ ಅವಕಾಶ ನೀಡಲಾಯಿತು. ಕಪ್ಪು ಪಟ್ಟಿ ಧರಿಸಿ ಎಂದಿನಂತೆ ಕರ್ತವ್ಯ ನಿರ್ವಹಿಸಿದ್ದರಿಂದ ಭಾಗಶಃ ಎಲ್ಲಿಯೂ ರೋಗಿಗಳಿಗೆ ತೊಂದರೆ ಎದುರಾಗಲಿಲ್ಲ.
ಬಣಗುಡುತ್ತಿದ್ದ ಆಸ್ಪತ್ರೆಗಳು: ಜ್ವರ, ನೆಗಡಿಯಂಥ ಸಾಮಾನ್ಯ ಕಾಯಿಲೆಗಳಿಗೆ ಹಾಗೂ ಡಯಾಲಿಸಿಸ್ ಸೇವೆಯಂತ ವೈದ್ಯಕೀಯ ಸೇವೆ ಸಿಗದೆ ಕೆಲವು ಕಡೆಗಳಲ್ಲಿ ರೋಗಿಗಳು ಆತಂಕಗೊಂಡಿದ್ದರು. ವೈದ್ಯರ ಹೋರಾಟದ ಮುನ್ಸೂಚನೆ ಹಿನ್ನೆಲೆಯಲ್ಲಿ ಬಹುತೇಕ ರೋಗಿಗಳು ಅಸ್ಪತ್ರೆಗಳತ್ತ ಮುಖ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಬಣಗುಡುತ್ತಿದ್ದವು. ತುರ್ತು ಸೇವೆ, ಒಳರೋಗಿ ಸೇವೆ, ಹೆರಿಗೆ, ತುರ್ತು ಚಿಕಿತ್ಸೆಯಂಥ ಸೇವೆಗಳಿಗೆ ಯಾವುದೇ ತೊಂದರೆಯಾಗದಂತೆ ಆಯಾ ತಾಲೂಕುಗಳ ವೈದ್ಯಾಧಿಕಾರಿಗಳು ನಿಗಾವಹಿಸಿದ್ದರು. ಬಹುತೇಕ ವೈದ್ಯಸಿಬ್ಬಂದಿ ಹೋರಾಟದಲ್ಲಿ ಭಾಗಿಯಾಗಿದ್ದರಿಂದ ಹಲವು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಕಂಡುಬಂತು. ಹಲವು ಕಡೆಗಳಲ್ಲಿ ಹೊರರೋಗಿಗಳ ವಿಭಾಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಶಸಚಿಕಿತ್ಸೆ ಮತ್ತಿತರರ ಸೇವೆಗಳಿಗೆ ನಾಳೆ ಬನ್ನಿ ಎಂಬ ಸಲಹೆ ವ್ಯಕ್ತವಾಯಿತು. ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಘೆ ಮತ್ತಿತರ ಸಾಂಕ್ರಾಮಿಕ ರೋಗ ತಪಾಸಣೆಯೂ ಮಧ್ಯಾಹ್ನದವರೆಗೆ ಸ್ಥಗಿತಗೊಂಡಿತ್ತು.
ಕಾಯ್ದಿರಿಸುವಿಕೆ ಮುಂದೂಡಿಕೆ: ದೇವನಹಳ್ಳಿ ಆಕಾಶ್ ಆಸ್ಪತ್ರೆ, ಹೊಸಕೋಟೆಯ ಎಂವಿಜೆ ಆಸ್ಪತ್ರೆ ಸೇರಿ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸಿಬ್ಬಂದಿ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು. ಶನಿವಾರ ಕಾಯ್ದಿರಿಸುವಿಕೆಯನ್ನು ಮುಂದೂಡುವಂತೆ ವೈದ್ಯರು ರೋಗಿಗಳಿಗೆ ಸಲಹೆ ನೀಡುತ್ತಿದ್ದರು. ಶನಿವಾರದ ಬದಲಾಗಿ ಭಾನುವಾರ ಭೇಟಿ ಮಾಡುವಂತೆ ರೋಗಿಗಳಿಗೆ ವೈದ್ಯಕೀಯ ಸಿಬ್ಬಂದಿ ಮನವಿ ಮಾಡಿದರು ಎನ್ನಲಾಗಿದೆ.
ಆಸ್ಪತ್ರೆ ಆವರಣಗಳಲ್ಲಿ ಪ್ರತಿಭಟನೆ: ಜಿಲ್ಲೆಯ ಹಲವು ಆಸ್ಪತ್ರೆಗಳ ಆವರಣದಲ್ಲಿ ವೈದ್ಯಕೀಯ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಕೊಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದರು. ಇಂತಹ ಅಮಾನವೀಯ ಪ್ರಕರಣಗಳು ಮರುಕಳಿಸಬಾರದು, ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ರೋಗಿಗಳ ಪ್ರಾಣ ರಕ್ಷಣೆ ಮಾಡುವ ವೈದ್ಯರ ಪ್ರಾಣಕ್ಕೆ ರಕ್ಷಣೆ ಇಲ್ಲದಂತಾಗಿರುವುದು ದುರಂತ, ಈ ಪ್ರಕರಣದಲ್ಲಿ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಇಂಥ ಮನಸ್ಥಿತಿಯ ದುಷ್ಕರ್ಮಿಗಳಿಗೆ ಪಾಠವಾಗಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಜಿಲ್ಲೆಯ ನಾಲ್ಕೂ ತಾಲೂಕುಗಳ ತಾಲೂಕು ಆರೋಗ್ಯಾಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು ಎಲ್ಲಿಯೂ ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಯಿತು. ಪ್ರಮುಖವಾಗಿ ಜಿಲ್ಲೆಯಲ್ಲಿ ವೈದ್ಯಕೀಯ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಎಂದಿನಂತೆ ಕರ್ತವ್ಯನಿರ್ವಹಿಸಿದ್ದರಿಂದ ಯಾವುದೇ ತೊಂದರೆಗೆ ಅವಕಾಶವಾಗಲಿಲ್ಲ. ಜಿಲ್ಲಾಡಳಿತದ ನಿರ್ದೇಶನದಂತೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ವೈದ್ಯಕೀಯ ಸೇವೆಯಲ್ಲಿ ಎಲ್ಲಿಯೂ ವ್ಯತ್ಯಯವಾಗಿಲ್ಲ.
ಡಾ.ಸುನೀಲ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ