

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲುಕು ಕನ್ನಮಂಗಲ ಗ್ರಾಮ ಪಂಚಾಯತಿಯ ಅಂಗನವಾಡಿ ಕಟ್ಟಡದ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿದ್ದಾರೆಂದು ದಾಖಲೆ ರಹಿತ ಸುಳ್ಳು ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಗ್ರಾಪಂ ಸದಸ್ಯನ ಸದಸ್ಯತ್ವ ರದ್ದುಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಭೀಮಶಕ್ತಿ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಎದುರು ಅಂಬೇಡ್ಕರ್ ಭಾವಚಿತ್ರವಿಟ್ಟು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಅನ್ಯಾಯಕ್ಕೊಳಗಾದ ಪ್ರತಿ ಮನುಷ್ಯನಿಗೂ ಹೋರಾಟ ಮಾಡುವ ಹಕ್ಕಿದೆ ಆದರೆ ಸುಳ್ಳು ಆರೋಪ ಮಾಡಿ ಗ್ರಾಪಂ ಸದಸ್ಯ ಅಪಹಾಸ್ಯಕ್ಕೆ ಈಡಾಗುತ್ತಿದ್ದಾರೆ ಅವರ ಆರೋಪಗಳ ದಾಖಲೆಗಳನ್ನು ನೀಡಬೇಕು ಯಾವುದೇ ಬೋಗಸ್ ಆಗಿದ್ದರೆ ಮೇಲಾಧಿಕಾರಿಗಳಿಂದ ತನಿಖೆ ನಡೆಯಲಿ ಸತ್ಯಾಸತ್ಯತೆ ಹೊರಬರುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಭೀಮಶಕ್ತಿಯ ರಾಜ್ಯ ಸಹಕಾರ್ಯದರ್ಶಿ ದಾಸರಬೀದಿ ಮುರಳಿ ಹೇಳಿದರು. ಮೊದಲು ಅಂಗನವಾಡಿ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದು ಎಂದರು ನಂತರ ಅಂಗನವಾಡಿ ಸ್ವತ್ತು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ ಎನ್ನುತ್ತಿದ್ದಾರೆ. ಇದರ ವಿಚಾರವಾಗಿ ನ್ಯಾಯಲಯದಲ್ಲಿ ಪ್ರಕರಣ ದಾಖಲಾಗಿದ್ದು ಈ ವ್ಯತ್ಯಾಸವಾಗಿದ್ದರಿಂದ ಎಂದು ಹೇಳಿದರು.
ವಿಶೇಷ ತನಿಖಾ ತಂಡ ರಚನೆ:
ಕನ್ನಮಂಗಲ ಅಂಗನವಾಡಿ ವಿಷಯದ ಕುರಿತು ಈಗಾಗಲೇ ಲೋಕಾಯುಕ್ತರು ತನಿಖೆ ಮಾಡುತ್ತಿದ್ದು, ವಿಶೇಷ ತನಿಖಾ ತಂಡ ರಚಿಸಿ ಏಳು ದಿನಗೊಳಗಾಗಿ ಕುಲಂಕೂಷವಾಗಿ ಪರಶೀಲಿಸಿ ವರದಿ ಸಲ್ಲಿಸಲಾಗುವುದು ಎಂದು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ರಮೇಶ್ ಹೇಳಿದರು.