

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನ ಸಾಸಲು ಹೋಬಳಿಯ ಬೈಯ್ಯಪ್ಪನಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ನೂರಾರು ಎಕರೆ ಭೂಮಿ ಕಬಳಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಬೈಯ್ಯಪ್ಪನಹಳ್ಳಿಯಲ್ಲಿ ರೈತರು ಐದಾರು ದಶಕಗಳಿಂದಲು ಉಳುಮೆ ಮಾಡಿಕೊಂಡು ಬರುತ್ತಿದ್ದ ಕೃಷಿ ಜಮೀನಿಗೆ ಭೂ ಮಾಫಿಯಾದವರು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ನಕಲಿ ದಾನಪತ್ರ ಮಾಡಿಕೊಟ್ಟಿರುವ ವ್ಯಕ್ತಿಯ ವಿಳಾಸ, ಸಂಬಂಧಿಗಳು ಎಲ್ಲರೂ ನಕಲಿಯೇ ಆಗಿದ್ದಾರೆ. ದಾನ ಪತ್ರ ನೋಂದಣಿ ಮಾಡಿಕೊಟ್ಟಿರುವ ವ್ಯಕ್ತಿಯು ದಾನ ಪತ್ರ ಮಾಡಿಕೊಟ್ಟ ಮೂರೇ ದಿನದಲ್ಲಿ ಮೃತಪಟ್ಟಿದ್ದಾರೆ ಎಂದು ಸುಳ್ಳು ದಾಖಲೆ ಸೃಷ್ಟಿಸಲಾಗಿದೆ ಎಂದು ದೂರಿದರು.
ರೈತರ ಮನವಿ ಸ್ವೀಕರಿಸಿದ ತಹಶೀಲ್ದಾರ್ ವಿಭಾವಿದ್ಯಾರಾಥೋಡ್ ಮಾತನಾಡಿ, ಮುಂದಿನ ಶನಿವಾರ ಈ ವಿವಾದ ಕುರಿತಂತೆ ರೈತರ ಸಭೆ ನಡೆಸಲಾಗುವುದು. ಮನವಿ ಪತ್ರದೊಂದಿಗೆ ನೀಡಲಾಗಿರುವ ಎಲ್ಲ ದಾಖಲೆ ಪರಿಶೀಲನೆ ನಡೆಸಿ ನಕಲಿ ಮಾಡಿರುವುದು ಸಾಬೀತಾದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದರು.