

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಪೆನ್‌ಡ್ರೈವ್ ಪ್ರಕರಣ ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿ ನಗರದ ಪ್ರವಾಸಿ ಮಂದಿರದ ಸಮೀಪ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮಾಜದ ನಾಯಕರು ಮತ್ತು ದೇವೇಗೌಡ, ಕುಮಾರಸ್ವಾಮಿ ಅವರ ಬೆಳವಣಿಗೆ ಸಹಿಸದೆ ಹಾಸನದ ಪೆನ್‌ಡ್ರೈವ್ ಸೃಷ್ಟಿಯಂತಹ ಹೀನ ಕೃತ್ಯಗಳನ್ನು ಮಾಡುತ್ತಿದ್ದಾರೆ. ಡಿಕೆಶಿ ಅವರ ಕೈಗೊಂಬೆಯಾಗಿರುವ ಎಸ್‌ಐಟಿ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ. ಹೀಗಾಗಿ ಸಿಬಿಐ ಅಥವಾ ನ್ಯಾಯಾಂಗ ತನಿಖೆ ಆಗಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನೇಗೌಡ ಒತ್ತಾಯಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಣ್ಣುಮಕ್ಕಳಿಗೆ ಗ್ಯಾರಂಟಿ ಆಮಿಷ ಒಡ್ಡಿ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ಹೆಣ್ಣು ಮಕ್ಕಳನ್ನು ಬೀದಿಗೆ ತಂದಿದ್ದಾರೆ. ಈ ಸರ್ಕಾರ ಇರಬೇಕೋ, ರಾಜೀನಾಮೆ ಕೊಟ್ಟು ಹೋಗಬೇಕೋ ಎಂಬುದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕಿದೆ. ಒಂದು ಕಡೆ ಆಸೆ ತೋರಿಸಿ, ಮತ್ತೊಂದು ಕಡೆ ಮಾನಹಾನಿ ಮಾಡುತ್ತಿರುವ ವಾಸ್ತವ ತಿಳಿಯಬೇಕು ಎಂದರು.
ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ ಮಾತನಾಡಿ, ಜೆಡಿಎಸ್‌ಗೆ ತೊಂದರೆ ಕೊಡಲು ಕಾಂಗ್ರೆಸ್ ಯತ್ನಿಸುತ್ತಿದೆ. ನಮ್ಮ ಪಕ್ಷ ಮಹಿಳೆಯರ ಬಗ್ಗೆ ಎಂದಿಗೂ ಅಗೌರವ ತೋರಿಸಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಆತಂಕ ಕಾಂಗ್ರೆಸ್ ಸರ್ಕಾರದ ಮೈತ್ರಿ ವೇಳೆ ಅಧಿಕಾರ ಮಾಡಲು ಬಿಡಲಿಲ್ಲ. ಆದರೆ, ಎನ್‌ಡಿಎ ಮೈತ್ರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದು, ಇದು ಕಾಂಗ್ರೆಸ್ ಸರ್ಕಾರದ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪೆನ್‌ಡ್ರೈವ್ ಷಡ್ಯಂತ್ರ ರೂಪಿಸಿದ್ದಾರೆ. ಒಬ್ಬ 2,800 ವಿಡಿಯೋ ಮಾಡಲು ಸಾಧ್ಯವೇ? ಇದನ್ನು ವಿಡಿಯೋ ವೈರಲ್ ಮಾಡಿದ ವ್ಯಕ್ತಿಯೇ ಚಿಂತಿಸಬೇಕಿತ್ತಲ್ಲವೇ? ಇದು ಜೆಡಿಎಸ್ ಅನ್ನು ತುಳಿಯುವ ಹುನ್ನಾರವಾಗಿದೆ. ರಾಹುಲ್ ಗಾಂಧಿ ಬಳಿ ಪ್ರಶಂಸೆ ಪಡೆಯಲು, ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ಸೋಲಿನ ಭಯದಿಂದ ಈ ರೀತಿ ಷಡ್ಯಂತ್ರ ರೂಪಿಸಲಾಗಿದೆ ಎಂದು ಮುನೇಗೌಡ ಆರೋಪಿಸಿದರು.
ಪಕ್ಷದ ವರಿಷ್ಠರು ಇಂತಹ ಷಡ್ಯಂತ್ರಕ್ಕೆ ಆತಂಕಕ್ಕೆ ಒಳಗಾಗಬೇಕಿಲ್ಲ. ಜೆಡಿಎಸ್, ಮುಖಂಡರು ಕಾರ್ಯಕರ್ತರು ನಿಮ್ಮ ಪರವಾಗಿ ಇದ್ದಾರೆ ಎಂದು ನೈತಿಕ ಬೆಂಬಲ ನೀಡಿದರು.