ಅಭ್ಯರ್ಥಿಗಳಿಗೆ ರೈತ ಹೋರಾಟಗಾರರ ಗುದ್ದು

1
ಚನ್ನರಾಯಪಟ್ಟಣದಲ್ಲಿ ಮಾಜಿ ಶಾಸಕರು ಹಾಗೂ ರೈತರ ನಡುವೆ ಮಾತಿನ ಚಕಮಕಿ
Published on

*ಮತ ಪ್ರಚಾರಕ್ಕೆ ಪೀಕಲಾಟ
*ರಾಜಕೀಯ ಮುಖಂಡರಿಗೆ ಮುಖಭಂಗ

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರಿರುವ ನಡುವೆಯೇ ದೇವನಹಳ್ಳಿ ಭಾಗದಲ್ಲಿ ಮತ ಪ್ರಚಾರಕ್ಕೆ ಬರುತ್ತಿರುವ ರಾಜಕೀಯ ಮುಖಂಡರು ರೈತ ಹೋರಾಟಗಾರರಿಂದ ತೀವ್ರ ಮುಖಭಂಗ ಎದುರಿಸುವಂತಾಗಿದೆ.
ದೇವನಹಳ್ಳಿ ತಾಲೂಕಿನಲ್ಲಿ ಮುಖ್ಯವಾಗಿ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಮತಪ್ರಚಾರಕ್ಕೆ ತೆರಳುತ್ತಿರುವ ಎರಡೂ ಪಕ್ಷದ ಅಭ್ಯರ್ಥಿಗಳು ಹಾಗೂ ಮುಖಂಡರು ಭೂಸ್ವಾಧೀನ ವಿರೋಧಿ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಈ ಭಾಗದಲ್ಲಿ ಚುನಾವಣಾ ಪ್ರಚಾರಕ್ಕೆ ಹೇಗೆ ಹೊರಡುವುದು ಎಂಬ ಪೀಕಲಾಟ ಶುರುವಾಗಿದೆ. ಚುನಾವಣೆ ವೇಳೆ ಕೈ ಮುಗಿದು ಮತ ಕೇಳಲು ಬರುವ ಅಭ್ಯರ್ಥಿಗಳು ಚುನಾವಣೆ ಬಳಿಕ ಕೈಗೂ ಸಿಗುವುದಿಲ್ಲ ಎಂಬುದು ರೈತ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಭೂಸ್ವಾಧೀನ ವಿರೋಧಿಸಿ ನಿರಂತರ ಹೋರಾಟ ನಡೆಸುತ್ತಿದ್ದರೂ ಯಾವುದೇ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸುವ ಯೋಚನೆ ಮಾಡುತ್ತಿಲ್ಲ. ಜನಪ್ರತಿನಿಧಿಗಳು ಮೂಗಿಗೆ ತುಪ್ಪ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶಗೊಂಡಿರುವ ರೈತ ಹೋರಾಟಗಾರರು ಮತಪ್ರಚಾರಕ್ಕೆ ಬರುತ್ತಿರುವ ರಾಜಕೀಯ ಮುಖಂಡರಿಗೆ ಬೆವರಿಳಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಸಭೆಗಳು ಮೊಟಕು: ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಸೇರಿ ಅಭ್ಯರ್ಥಿಗಳ ಪರ ಮತಪ್ರಚಾರಕ್ಕೆ ಕೈಗೊಳ್ಳುತ್ತಿರುವ ಸಭೆಗಳು ಮೊಟಕುಗೊಳ್ಳುತ್ತಿವೆ. ಭೂಸ್ವಾಧೀನ ವಿರೋಧಿ ಹೋರಾಟಗಾರರನ್ನು ಸಮಾಧಾನಗೊಳಿಸುವಲ್ಲಿ ವಿಲ ಯತ್ನ ನಡೆಸುತ್ತಿರುವ ರಾಜಕೀಯ ಮುಖಂಡರು ಸ್ಥಳದಿಂದ ಕಾಲ್ಕೆಳುತ್ತಿದ್ದಾರೆ. ಕಳೆದ ವಾರದಿಂದೀಚೆಗೆ ಹೋರಾಟಗಾರರ ಆಕ್ರೋಶ ತೀವ್ರಗೊಂಡಿದ್ದು, ಈ ಭಾಗದಲ್ಲಿ ಮತಪ್ರಚಾರಕ್ಕೆ ಕಾಲಿಡುವ ಪ್ರತಿಯೊಬ್ಬರೂ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ಮೂರೂ ಪಕ್ಷಗಳಿಗೂ ತಲೆಬಿಸಿ ಭೂಸ್ವಾಧೀನ ವಿರೋಧಿ ಹೋರಾಟ ಆರಂಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಅಂದಿನ ಉಸ್ತುವಾರಿ ಸಚಿವರಾದಿಯಾಗಿ ಸಿಎಂವರೆಗೆ ಹೋರಾಟಗಾರರು ನ್ಯಾಯಕ್ಕಾಗಿ ಮೊರೆ ಇಟ್ಟಿದ್ದರೂ ಸರ್ಕಾರ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ವರ್ತಿಸಿತ್ತು. ನಂತರದಲ್ಲಿ ಎದುರಾದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನ್ಯಾಯಕೊಡಿಸುವ ಭರವಸೆ ನೀಡಿ ಮತಯಾಚನೆ ಮಾಡಿದ್ದರು. ನಂತರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ. ಈ ಬಾರಿ ಜೆಡಿಎಸ್‌ನವರು ಬಿಜೆಪಿ ಜತೆ ಸಖ್ಯ ಬೆಳೆಸಿರುವುದರಿಂದ ಅವರನ್ನು ಕೇಳುವ ಪ್ರಮೇಯವೇ ಇಲ್ಲ ಎಂಬುದು ರೈತ ಪರ ಹೋರಾಟಗಾರರ ಆಕ್ರೋಶದ ನುಡಿಗಳಾಗಿವೆ.

ಸ್ವ ಕ್ಷೇತ್ರದಲ್ಲೇ ಪೇಚಿಗೆ ಸಿಲುಕಿದ ಉಸ್ತುವಾರಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಚಿವ ಕೆ.ಎಚ್.ಮುನಿಯಪ್ಪ ವಿರುದ್ಧ ರೈತರು ಧಿಕ್ಕಾರ ಕೂಗಿ ಪ್ರತಿಭಟಿಸಿದ ಪ್ರಕರಣ ನಡೆದಿದ್ದು, ಸ್ವ ಕ್ಷೇತ್ರದಲ್ಲಿಯೇ ಉಸ್ತುವಾರಿ ಸಚಿವರು ತೀವ್ರ ಮುಖಭಂಗ ಎದುರಿಸುವಂತಾಯಿತು. ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣದ ವೃತ್ತದಲ್ಲಿ ಮತ ಪ್ರಚಾರದ ವೇಳೆ ಸಚಿವರು ಭಾಷಣ ಪ್ರಾರಂಭಿಸಿದಾಗ, ಭೂ ಸ್ವಾಧೀನ ವಿರೋಧಿ ಹೋರಾಟನಿರತ ರೈತರು ಹಸಿರು ಬಾವುಟ ಪ್ರದರ್ಶಿಸಿ ರಾಜಕೀಯ ಪಕ್ಷಗಳ ಧೋರಣೆ ಖಂಡಿಸುವ ನಿಟ್ಟಿನಲ್ಲಿ ಪ್ರತಿಭಟಿಸಿದರು. ಇದರಿಂದ ಪೇಚಿಗೆ ಸಿಲುಕಿದ ಕಾಂಗ್ರೆಸ್ ಮುಖಂಡರು ಪ್ರತಿಭಟನಾನಿರತ ರೈತರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರೂ ಸಂಧಾನ ವಿಫಲವಾಗಿ ಹೋರಾಟ ಇನ್ನಷ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಮತ ಪ್ರಚಾರ ಸಭೆ ಮೊಟಕುಗೊಳಿಸಲಾಯಿತು.

ಮಾಜಿ ಎಂಎಲ್‌ಎಗಳಿಗೆ ಪ್ರತಿಭಟನೆ ಬಿಸಿಮೂವರು ಮಾಜಿ ಶಾಸಕರ ನೇತೃತ್ವದಲ್ಲಿ ಸುಧಾಕರ್ ಪರ ಮತಯಾಚನೆಗೆ ಚನ್ನರಾಯಪಟ್ಟಣ ಹೋಬಳಿ ಮುಖಂಡ ಮುನಿರಾಜು ಮನೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಹೊರ ಬರುತ್ತಿದ್ದಂತೆ ಭೂ ಸ್ವಾಧೀನ ವಿರೋಧಿ ಹೋರಾಟನಿರತ ರೈತರು, ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದ ಮುಖಂಡರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಪಿಳ್ಳಮುನಿಶಾಮಪ್ಪ, ಜಿ.ಚಂದ್ರಣ್ಣ ಇದರಿಂದ ತೀವ್ರ ಮುಖಭಂಗ ಎದುರಿಸುವಂತಾಯಿತು.


ಚನ್ನರಾಯಪಟ್ಟಣದ ರೈತರ ಹೋರಾಟ 2 ವರ್ಷ ಪೂರೈಸಿದೆ. ಆದರೂ ನಮ್ಮ ನಿರಂತರ ಹೋರಾಟಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಚುನಾವಣೆ ವೇಳೆ ಮತಪ್ರಚಾರಕ್ಕೆ ಬರುವವರ ಆಶ್ವಾಸನೆ ಕೇಳಿ ಸಾಕಾಗಿಹೋಗಿದೆ. ಚುನಾವಣೆ ಬಳಿಕ ಇವರ‌್ಯಾರೂ ಇತ್ತ ಸುಳಿಯುವುದಿಲ್ಲ. ಮತಪ್ರಚಾರದ ವೇಳೆ ಕೈಮುಗಿದು ಬರುವ ಅಭ್ಯರ್ಥಿಗಳು ನಂತರದಲ್ಲಿ ಕೈಗೂ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಸಿದ್ದವಾಗುತ್ತಿದೆ.

ಕಾರಹಳ್ಳಿ ಶ್ರೀನಿವಾಸ್, ಸದಸ್ಯ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net