

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ರಾಮನಗರದ ಐಜೂರು ಪೊಲೀಸ್ ಇನ್‌ಸ್ಪೆಕ್ಟರ್ ವಿನಾಕಾರಣ ವಕೀಲರ ಮೇಲೆ ಎಫ್‌ಐಆರ್ ದಾಖಲಿಸಿರುವುದನ್ನು ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿ ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ನೇತೃತ್ವದಲ್ಲಿ ಕೋರ್ಟ್ ಕಲಾಪ ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸಿದರು.
ಹಿರಿಯ ವಕೀಲ ರುದ್ರಾರಾಧ್ಯ ಮಾತನಾಡಿ, ನ್ಯಾಯಾವಾದಿಗಳಿಗೆ ಯಾವುದೇ ಧರ್ಮವಿಲ್ಲ, ನಮಗೆ ನಮ್ಮ ಕಕ್ಷಿದಾರನಿಗೆ ನ್ಯಾಯ ಒದಗಿಸುವುದೇ ಧರ್ಮ. ಸಂವಿಧಾನದ ಆಶಯಗಳಾದ ಭ್ರಾತೃತ್ವ, ಸೋದರತೆ ಕಾಯ್ದುಕೊಳ್ಳುವುದು ಮತ್ತು ಕೋಮುವಾದ ಅಳಿಸುವುದು ನಮ್ಮ ಕರ್ತವ್ಯವಾಗಬೇಕು. ಇಂದು ಕೋಮುವಾದ ಹಾಗೂ ಮೂಲಭೂತವಾದಗಳು ಬೆಳೆದು ನಿಂತಿವೆ. ಅದು ಯಾವುದೇ ಧರ್ಮದ ಮೂಲಭೂತವಾದರೂ ಅದು ಮಾನವ ವಿರೋಧಿಯಾದುದು. ಇಂತಹ ವಿಷಯಗಳು ಹೆಚ್ಚಾದಾಗ ಮನುಷ್ಯ ಮನುಷ್ಯನ ನಡುವೆ ಭೇದ ಉಂಟಾಗುತ್ತದೆ ಎಂದರು.
ನ್ಯಾಯಾಲಯಗಳು ನೀಡುವ ಆದೇಶ ಟೀಕಿಸುವ ಹಕ್ಕು ಇದೆ. ಆದರೆ, ಅದು ಕಾನೂನು ವ್ಯಾಪ್ತಿ ಮೀರಬಾರದು. ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಂಚಿಕೊಂಡವರು ತಪ್ಪು ಮಾಡಿದ್ದರೆ, ಅವರ ವಿರುದ್ಧ ಕೇಸು ದಾಖಲು ಮಾಡಬೇಕಿತ್ತು. ಆದರೆ, ಈವರೆಗೂ ಆತನ ಮೇಲೆ ಕೇಸು ದಾಖಲಿಸಿಲ್ಲ. ಬದಲಿಗೆ ವಕೀಲ ಸಮುದಾಯದ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ ಎಂದರು.
ವಕೀಲರ ಮೇಲೆ ದಾಖಲು ಮಾಡಿರುವುದನ್ನು ಈ ಕೂಡಲೇ ವಜಾ ಮಾಡಬೇಕು. ವಕೀಲರ ನಡುವೆ ಸಾಮರಸ್ಯ ಕಾಪಾಡಬೇಕು. ಜಿಲ್ಲಾಡಳಿತ ಮಧ್ಯೆ ಪ್ರವೇಶ ಮಾಡಿ, ಸೂಕ್ತ ತನಿಖೆ ನಡೆಸಿ, ಪ್ರಕರಣವನ್ನು ಶಾಂತ ರೀತಿಯಲ್ಲಿ ಬಗೆಹರಿಸಬೇಕು ಎಂದು ಒತ್ತಾಯಿಸಿದರು.