

ಮೈಸೂರು: ಕಾವೇರಿ ನದಿ ನೀರು ಉಳಿವಿಗೆ ಕಾವೇರಿ ಕ್ರಿಯಾ ಸಮಿತಿ ನಗರದ ಪುರಭವನ ಬಳಿ ಹಮ್ಮಿಕೊಂಡಿರುವ ಪ್ರತಿಭಟನೆ ಶುಕ್ರವಾರ 74ನೇ ದಿನವನ್ನು ಪೂರೈಸಿತು.
ಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್ ಮಾತನಾಡಿ, ಕೆಆರ್‌ಎಸ್ ಜಲಾಶಯದಲ್ಲಿ ನೀರು ಬರಿದಾಗುತ್ತಿದ್ದರೂ ನಿರಂತರವಾಗಿ ತಮಿಳು ನಾಡಿಗೆ ನೀರು ಹರಿಸುತ್ತಿರುವುದು ಸರಿಯಲ್ಲ. ಇದರಿಂದ ಮೈಸೂರು ಹಾಗೂ ಬೆಂಗಳೂರು ನಿವಾಸಿಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದ್ದು, ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಡಾ.ರಾಜ್‌ಕುಮಾರ್ ಅಭಿಮಾನಿ ಸಂಘದ ಸ್ಥಾಪಕ ಅಧ್ಯಕ್ಷ ರಾಮೇಗೌಡ ಮಾತನಾಡಿ, ತಮಿಳುನಾಡಿಗೆ ನಿರಂತರ ನೀರು ಹರಿಸುವು ದರಿಂದ ರಾಜ್ಯದ ಜನರು ಮಂದಿನ ದಿನಗಳಲ್ಲಿ ಎದುರಿಸುವ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕು ಎಂದರು.
ಪ್ರತಿಭಟನೆಯಲ್ಲಿ ಸಮಿತಿ ಪದಾಧಿಕಾರಿಗಳಾದ ಮೆಲ್ಲಳ್ಳಿ ಮಹಾದೇವಸ್ವಾಮಿ, ಎಂ.ಜೆ.ಸುರೇಶ್ ಗೌಡ, ಆಟೋ ಮಾದೇವ, ತೇಜೇಶ್ ಲೋಕೇಶ್ ಗೌಡ, ಶಿವಲಿಂಗಯ್ಯ, ಪುಷ್ಪಾವತಿ, ಕೆ.ಮಂಜುಳಾ , ಶಿವಕುಮಾರ್ ಸಿಂಧುವಳ್ಳಿ, ಶ್ರೀನಿವಾಸ್, ಪೈಲ್ವಾನ್ ಬಾಲಾಜಿ ಹಾಗೂ ಇತರರು ಪಾಲ್ಗೊಂಡಿದ್ದರು.