ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಪಟ್ಟು

pvc
ಪ್ರತಿಭಟನೆ
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ತಾಲೂಕು ಕಚೇರಿಯಲ್ಲಿ ಪಾರದರ್ಶಕ ಮತ್ತು ಬಡವರ ಪರ ಸೇವೆ ನೀಡಬೇಕು. ಸರ್ಕಾರಿ ಭೂಮಿ ಒತ್ತುವರಿ ತೆರವು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆ ಪದಾಧಿಕಾರಿಗಳು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಮಾತನಾಡಿ, ತಾಲೂಕಿನ ಜಿಗಣಿ ಹೋಬಳಿಯ ಹುಲಿಮಂಗಲದಲ್ಲಿ 2.5 ಎಕರೆ ಸರ್ಕಾರಿ ಜಮೀನು ಇದೆ. ಇದರಲ್ಲಿ 30-40 ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳು ಮನೆ ಕಟ್ಟಿಕೊಂಡು ವಾಸ ಮಾಡುತ್ತಿವೆ. ಆದರೆ ಕೆಲವು ಪ್ರಭಾವಿಗಳು ಏಕಾಏಕಿ ಜಮೀನನ್ನು ಖಾತೆ ಮಾಡಿಕೊಂಡಿದ್ದಾರೆ. ಹಾಗಾಗಿ ಖಾತೆದಾರರ ಹೆಸರನ್ನು ರದ್ದುಗೊಳಿಸಿ ಪರಿಶಿಷ್ಟರ ಸುಗಮ ಜೀವನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡಬೇಕು. ಪ್ರಭಾವಿಗಳು ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಹಾಗಾಗಿ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಹುಲಿಮಂಗಲ ಗ್ರಾಪಂ ಸದಸ್ಯ ಹುಲಿಮಂಗಲ ರವಿಕುಮಾರ್ ಮಾತನಾಡಿ, ಜಮೀನಿನ ಖಾತೆ ಬದಲಾವಣೆಯಾಗಿರುವ ಸಂಬಂಧ ಹುಲಿಮಂಗಲ ಗ್ರಾಮಸಭೆಯ ಸಾಮಾನ್ಯ ಸಭೆಯಲ್ಲಿಯೂ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ. ಹಾಗಾಗಿ ಕಂದಾಯ ಇಲಾಖೆಯು ಸರ್ಕಾರಿ ಜಾಗದಲ್ಲಿನ ಖಾತೆದಾರರ ಹೆಸರನ್ನು ರದ್ದುಪಡಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಶೇಷ ತಹಸೀಲ್ದಾರ್ ಕರಿಯ ನಾಯಕ್ ಅವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಸಂತೋಷ್, ಭಾಗ್ಯಮ್ಮ, ಸರೋಜಮ್ಮ, ಮಂಜುಳಾ, ಪರಶುರಾಮ್, ಮದ್ದೂರಪ್ಪ, ಮುನಿರಾಜು, ಮುನಿಯಪ್ಪ, ವೆಂಕಟೇಶ್, ಗಣೇಶ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net