

ವಿಜಯವಾಣಿ ಸುದ್ದಿಜಾಲ ಆನೇಕಲ್
ಕಂದಾಯ ಮತ್ತು ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯ ವಿರೋಧಿಸಿ ತಾಲೂಕು ಕಚೇರಿ ಮುಂಭಾಗ ದಲಿತ ಹಾಗೂ ಪ್ರಗತಿಪರ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಶಶಿಧರ್‌ಗೆ ಮನವಿ ಸಲ್ಲಿಸಿದರು.
ಮುಖಂಡ ಗೌತಮ್ ವೆಂಕಿ ಮಾತನಾಡಿ, ತಾಲೂಕು ಮೀಸಲು ಕ್ಷೇತ್ರವಾಗಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಅಧಿಕಾರದ ವರ್ಗದ ನಿರ್ಲಕ್ಷ್ಯ ಮತ್ತು ಉದಾಸೀನತೆ ಧೋರಣೆಯಿಂದಾಗಿ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಬಲಾಢ್ಯಪರ ಕೆಲಸ ಮಾಡುತ್ತಿದ್ದು, ಬಡವರ ಕೆಲಸ ಮಾಡಿಕೊಡುತ್ತಿಲ್ಲ. ತಾಲೂಕು ಕಚೇರಿ ಮಧ್ಯವರ್ತಿಗಳ ಕೇಂದ್ರವಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಅಲ್ಲದೆ ಸರ್ಕಾರಿ ಕಡತಗಳನ್ನು ಹೋಟೆಲ್‌ಗಳಲ್ಲಿ ೈನಲ್ ಆಗುತ್ತಿವೆ. ಈ ಅವ್ಯವಸ್ಥೆ ಸರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳು ಒಗ್ಗೂಡಿ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶಶಿಧರ್, ಬೇಡಿಕೆ ಸರ್ಕಾರದೊಂದಿಗೆ ಚರ್ಚಿಸಿ ಮಾತುಕತೆ ಮಾಡಲಾಗಿದೆ. ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದರು.
ಮುಖಂಡರಾದ ಕ್ರಾಂತಿ ಗೋವಿಂದ್, ಗೂಳಿಮಂಗಲ ನಾಗಪ್ಪ, ಮುನಿರಾಜು, ಸಂಪಿಗೆ ನಾಗರಾಜು, ಜಾಲಿ ವೆಂಕಟೇಶ್, ಪ್ರದೀಪ್ ಚಾಲುಕ್ಯ, ಎಸ್.ಉಮೇಶ್, ಶಶಿಕುಮಾರ್, ಇಂಡ್ಲವಾಡಿ ಮಹದೇವ್ ಇದ್ದರು.