ಉಪವಾಸ ಸತ್ಯಾಗ್ರಹ ಆರಂಭ

08arsph1ep
Published on

ಅರಸೀಕೆರೆ : ಕೇಂದ್ರ ಸರ್ಕಾರ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಮಾಡಬೇಕು ಎಂದು ಆಗ್ರಹಿಸಿ ಸೌತ್ ವೆಸ್ಟ್ರನ್ ರೈಲ್ವೆ ಮಜ್ದೂರ್ ಯೂನಿಯನ್ ಪದಾಧಿಕಾರಿಗಳು ನಗರದ ರೈಲ್ವೆ ನಿಲ್ದಾಣದ ಮುಂಭಾಗ ಸೋಮವಾರ ಬೆಳಗ್ಗೆಯಿಂದ ಸರತಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಸಂಘಟನೆಯ ತಾಲೂಕು ಅಧ್ಯಕ್ಷ ಆಲ್ಬರ್ಟ್ ಅನಿಲ್ ಮಾತನಾಡಿ, 2004ರ ನಂತರ ನೇಮಕಗೊಂಡಿರುವ ಎಲ್ಲ ನೌಕರರಿಗೆ ಹೊಸ ಪಿಂಚಣಿ ನೀಡುತ್ತಿದ್ದು, ಭದ್ರತೆ ಇಲ್ಲದಂತಾಗಿದೆ. ಇದರಿಂದಾಗಿ ನಿವೃತ್ತಿಗೊಂಡ ಬಳಿಕ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಪ್ರಯಾಣಿಕ ಸ್ನೇಹಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ನೌಕರರ ಹಿತ ಮನಗಂಡು ತಕ್ಷಣವೇ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಮಾಡಬೇಕು. ಬೇಡಿಕೆಗೆ ಸ್ಪಂದನೆ ದೊರೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಕಾರ್ಯದರ್ಶಿ ಪ್ರಭುಕುಮಾರ್ ಮಾತನಾಡಿ ರೈಲ್ವೆ ಉದ್ಯೋಗಗಳ ಸಂಬಳದಲ್ಲಿ ಕಡಿತಗೊಳಿಸಿ ಷೇರು ಮಾರುಕಟ್ಟೆಗೆ ವಿನಿಯೋಗಿಸಿ ನಿವೃತ್ತಿ ನಂತರ ನೀಡುವುದಾಗಿ ಹೇಳುತ್ತಿರುವುದು ಅವೈಜ್ಞಾನಿಕ. ಇದರಿಂದ ಅತ್ಯಂತ ಕಡಿಮೆ ಹಣ ದೊರೆಯಲಿದ್ದು ಸಂಸಾರ ನಿರ್ವಹಣೆ ಮಾಡುವುದು ಕಷ್ಟಕರವಾಗಲಿದೆ. ಸಮಸ್ಯೆಯ ಗಂಭೀರತೆಯನ್ನು ಎರಡು ವರ್ಷದ ಹಿಂದೆಯೇ ಮನವರಿಕೆ ಮಾಡಿಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದಲೇ ಸರತಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ ಎಂದರು.
ರೈಲ್ವೆ ಓಪನ್ ಲೈನ್ ಶಾಖೆ ಅಧ್ಯಕ್ಷ ರಾಘವೇಂದ್ರ, ಖಜಾಂಚಿ ಶಿವಶಂಕರ್, ಕುಮಾರಸ್ವಾಮಿ,ಉಪಾಧ್ಯಕ್ಷರಾದ ಶಶಿಧರ್, ಅಲ್ತಾಫ್ ಸೇರಿದಂತೆ ಮುಖಂಡರಾದ ಶೇಷಾದ್ರಿ, ಪ್ರತಾಪ್, ಗೋವಿಂದ, ಹರೀಶ್ ಇತರರು ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net