ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ

ಫೋಟೋ ಶೀರ್ಷಿಕೆ 15 ಸಿಆರ್_ಪಿ-1ಎ
Published on

ಚನ್ನರಾಯಪಟ್ಟಣ : ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವ ಮೂಲಕ ವಿದ್ಯಾರ್ಥಿಗಳ ಪಾಠ, ಪ್ರವಚನಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಾಲೇಜು ಆವರಣದಿಂದ ಮೆರವಣಿಗೆಯಲ್ಲಿ ತೆರಳಿದ ವಿದ್ಯಾರ್ಥಿಗಳು ತಾಲೂಕು ಕಚೇರಿ ಆವರಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ವಿದ್ಯಾರ್ಥಿ ನಾಯಕಿ ಪ್ರಕೃತಿ ಮಾತನಾಡಿ, ರಾಜ್ಯದಲ್ಲಿರುವ ಹಲವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನ. 23 ರಿಂದ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಪಾಠಗಳಿಗೆ ಸಮಸ್ಯೆಯಾಗುತ್ತಿದೆ. ಕಾಲೇಜಿನ ಶೈಕ್ಷಣಿಕ ವರ್ಷ ಆರಂಭವಾದಾಗ ಒಂದು ತಿಂಗಳು ತಡವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುತ್ತದೆ. ನಂತರ ಮೌಲ್ಯಮಾಪನ ಕರ್ತವ್ಯಕ್ಕೆ ತೆರಳುತ್ತಾರೆ. ಒಂದುವರೆ ತಿಂಗಳು ಮಾತ್ರ ಪಾಠಕ್ಕೆ ಅವಕಾಶ ಸಿಗುತ್ತದೆ. ಉಪನ್ಯಾಸಕರು ಈಗ ಪ್ರತಿಭಟನೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇದನ್ನು ಬಗೆಹರಿಸಲು ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಕಾಲೇಜುಗಳಿಗೆ ಕಾಯಂ ಉಪನ್ಯಾಸಕರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ಕಾರ್ಯಕರ್ತ ಎಂ.ಕೆ. ಮಂಜುನಾಥ ಮಾತನಾಡಿ, ಪಠ್ಯ ವಿಷಯ ಬೋಧನೆ ಪೂರ್ಣವಾಗಿಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಪರೀಕ್ಷೆ ದಿನಾಂಕ ನಿಗದಿಯಾಗಿದೆ. ಅತಿಥಿ ಉಪನ್ಯಾಸಕರ ಪರವಾಗಿ ನೀತಿ ನಿಯಮಾವಳಿ ರೂಪಿಸಿ ಅವರಿಗೆ ಸೇವಾ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದರು. ನಂತರ ಶಿರಸ್ತೇದಾರ್ ಪವನ್‌ಕುಮಾರ್‌ಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net