

ಮಡಿಕೇರಿ:
ನಗರದ ರಾಜಾಸೀಟು-ಮುನೀಶ್ವರ ದೇವಾಲಯದ ಸಂಪರ್ಕ ರಸ್ತೆಯನ್ನು ಶೀಘ್ರ ದುರಸ್ತಿಪಡಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ವೀರನಾಡು ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸ್ಥಳದಲ್ಲಿ ಸೇರಿದ ವೇದಿಕೆಯ ಪ್ರಮುಖರು ಹಾಗೂ ಸ್ಥಳೀಯರು, ನಗರಸಭೆಯ ವಿರುದ್ಧ ಘೋಷಣೆಯನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ, ಹಾನಿಗೀಡಾದ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸದೆ ಮಡಿಕೇರಿ ನಗರಸಭೆೆ ನಿದ್ರಾವಸ್ಥೆಗೆ ಜಾರಿದೆ ಎಂದು ಆರೋಪಿಸಿದರು.
ಈಗಾಗಲೇ ಈ ರಸ್ತೆಯಲ್ಲಿ ವಾಹನ ಸವಾರರು, ಪಾದಚಾರಿಗಳು ಸಂಚರಿಸಲು ಹರಸಾಹಸ ಪಡುವಂತಾಗಿದ್ದು, ತಕ್ಷಣ ದುರಸ್ತಿ ಪಡಿಸುವಂತೆ ಒತ್ತಾಯಿಸಿದರು.
ಮುಂಗಾರು ಪ್ರಾರಂಭವಾಗಲಿದ್ದು, ನಗರದ ಸ್ಟೋನ್‌ಹಿಲ್‌ನನಲ್ಲಿ ಸುರಿಯಲಾಗುತ್ತಿರುವ ಕಸದಿಂದ ಸಾಂಕ್ರಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಆಗ್ರಹಿಸಿರು. ನಗರಸಭೆ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿದರು.
ವೇದಿಕೆಯ ನಗರಾಧ್ಯಕ್ಷ ಪ್ರದೀಪ್ ಕರ್ಕೆರ, ಸದಸ್ಯರಾದ ಗಣೇಶ್, ರಾಜ ಹಾಗೂ ಸ್ಥಳೀಯರಾದ ಸಿದ್ದರಾಜು, ದೇವಯ್ಯ, ಗೀತಾ, ಜುಲೇಕಾಬಿ ಸೇರಿದಂತೆ ಮತ್ತಿತರು ಪ್ರತಿಭಟನೆಯಲ್ಲಿ ಇದ್ದರು.