

ತುಮಕೂರು : ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಹಾಗೂ ಮಾಜಿ ಶಾಸಕ ಡಾ.ರಫೀಕ್‌ಅಹಮದ್ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತ್ರಿವರ್ಣ ಧ್ವಜ, ರಾಷ್ಟ್ರದ ಸ್ವಾತಂತ್ರ್ಯ, ಅಖಂಡತೆ, ಸಾರ್ವಭೌಮತೆ, ಅಸ್ಮಿತೆ ಮತ್ತು ಸಂವಿಧಾನಗಳ ಸಂಕೇತವಾಗಿದ್ದು, ಸಚಿವ ಈಶ್ವರಪ್ಪ ನೀಡಿರುವುದು ದೇಶದ್ರೋಹ ಹೇಳಿಕೆಯಾಗಿದೆ. ಆದ್ದರಿಂದ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಟ್ಟು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಆಗ್ರಹಿಸಿದರು.
ದೇಶ ದ್ರೋಹದ ಹೇಳಿಕೆ, ಸಂವಿಧಾನ ಆಶಯಗಳಿಗೆ ದಕ್ಕೆಯಾಗುವ ವಿಚಾರ ಹಾಗೂ ರಾಷ್ಟ್ರ ಲಾಂಛನಗಳಿಗೆ ಅಪಮಾನ ಮಾಡುವುದನ್ನು ಸಹಿಸಲಾಗುವುದಿಲ್ಲ. ಇಂತಹ ಘಟನೆಗಳೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ವ್ಯಕ್ತಿಯನ್ನು ಸಚಿವರಾಗಿ ಒಪ್ಪಿಕೊಳ್ಳುವುದು ಅಸಾಧ್ಯ ಎಂದರು. ಕೂಡಲೇ ಬಿಜೆಪಿ ಹೈಕಮಾಂಡ್ ಸಚಿವ ಈಶ್ವರಪ್ಪನವರ ರಾಜೀನಾಮೆ ಪಡೆಯಬೇಕು ಹಾಗೂ ರಾಜ್ಯಪಾಲರು ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಲಾಯಿತು. ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ನಯಾಜ್, ಮಹೇಶ್, ಆಟೋರಾಜು, ಮೆಹಬೂಬು ಪಾಷ, ಗುರುಪ್ರಸಾದ್, ಸುಜಾತ, ಸವಿತಾ, ಮಂಗಳಾ, ನಾಗಮಣಿ, ಸಂಜೀವಕುಮಾರ್, ಶ್ರೀನಿವಾಸ್ ಮತ್ತಿತರರು ನೇತೃತ್ವ ವಹಿಸಿದ್ದರು.
ರಾಜ್ಯದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಾರಿಸುವ ವಿಚಾರದ ಬದಲು ಕೇಸರಿ ಧ್ವಜ ಹಾರಿಸುವ ವಿಚಾರಗಳನ್ನು ಮಾತನಾಡುವಂತೆ ಮಾಡಲಾಗುತ್ತಿದೆ. ಈಶ್ವರಪ್ಪನವರು ನಾಲಿಗೆ ಹರಿಬಿಟ್ಟು ರಾಷ್ಟ್ರಧ್ವಜದ ಬಗ್ಗೆ ಹಾಗೂ ದೇಶದ ಜನರಿಗೆ ಬಹಳ ದುರಂಹಕಾರವಾಗಿ ಮಾತನಾಡಿದ್ದಾರೆ. ಆರ್.ರಾಮಕೃಷ್ಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ