

ತುಮಕೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ಮುಂದುವರಿದಿದ್ದು, ಕಾಲೇಜುಗಳಲ್ಲಿ ಪಾಠವಿಲ್ಲದೆ ವಿದ್ಯಾರ್ಥಿಗಳು ಮಂಕಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಮುಂದುವರಿಸಿರುವ ಜಿಲ್ಲೆಯ ಅತಿಥಿ ಉಪನ್ಯಾಸಕರನ್ನು ಕೂಡಿಕೊಂಡ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಜನರು ಸಿದ್ಧಗಂಗಾ ಮಠಕ್ಕೆ ತೆರಳಿ ಶ್ರೀಸಿದ್ದಲಿಂಗಸ್ವಾಮೀಜಿ ಅವರನ್ನು ಭೇಟಿಯಾಗಿ ಸರ್ಕಾರಕ್ಕೆ ಒತ್ತಡ ತರುವಂತೆ ಮನವಿ ಮಾಡಿದರು.
ಸಿದ್ಧಗಂಗಾ ಮಠದಲ್ಲಿ ನೂರಾರು ಅತಿಥಿ ಉಪನ್ಯಾಸಕರನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿ ರಾಜ್ಯ ಸಂಚಾಲಕ ಜಿ.ಕೆ.ನಾಗಣ್ಣ, ರಾಜ್ಯ ಸರ್ಕಾರ ಮಾನವೀಯತೆಯನ್ನೇ ಮರೆತು ಎಲ್ಲ ಅತಿಥಿ ಉಪನ್ಯಾಸಕರನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿದೆ ಎಂದರು.
ಪಾಠ ಮಾಡುವ ಅವಧಿಯನ್ನು ದ್ವಿಗುಣಗೊಳಿಸಿ ವೇತನವನ್ನೂ ಜಾಸ್ತಿ ಮಾಡಿ ಏನೊ ದೊಡ್ಡ ಉಪಕಾರ ಮಾಡಿರುವಂತೆ ರಾಜ್ಯ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಆದರೆ, ನಮ್ಮ ಬೇಡಿಕೆ ಸೇವಾ ಭದ್ರತೆಯೇ ಆಗಿದ್ದು, ಇದರ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ತೀರ್ಮಾನ ಕೈಗೊಳ್ಳಬೇಕು ಎಂದರು.
ನಾಡಿನ ಮಠಾಧೀಶರನ್ನು ಭೇಟಿಯಾಗಿ ನಮ್ಮ ಅಳಲು ತೋಡಿಕೊಳ್ಳುವ ಕೆಲಸ ಮಾಡಲಾರಂಭಿಸಿದ್ದೇವೆ, ಗುರುಗಳ ಮೂಲಕವಾದರೂ ಸಚಿವರಿಗೆ ಬುದ್ಧಿ ಹೇಳಿಸಬಹುದು ಎಂಬ ಆಸೆಯಿಂದ ಎಲ್ಲೆಡೆಯಿಂದ ಅತಿಥಿ ಉಪನ್ಯಾಸಕರು ಸಿದ್ಧಗಂಗಾ ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದಾರೆ ಎಂದರು.
ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿ, ಅತಿಥಿ ಉಪನ್ಯಾಸಕರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಅದಾಗದಿದ್ದರೆ ಹೋರಾಟದ ಸ್ವರೂಪ ಬದಲಿಸುವುದು ಅನಿವಾರ್ಯವಾಗಿದೆ ಎಂದರು.
ಮುಖಂಡ ರಂಗಧಾಮಯ್ಯ ಮಾತನಾಡಿ, ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ವರ್ಷ ಮುಗಿಯುವ ಮುಂಚೆಯೇ ಹೊಸ ಅರ್ಜಿ ಆಹ್ವಾನಿಸಿದೆ. ಹಿರಿಯ, ಕಿರಿಯ ಉಪನ್ಯಾಸಕರ ನಡುವೆಯೇ ದ್ವೇಷ ಬಿತ್ತುವ ಕೆಲಸ ಕೂಡ ಮಾಡುತ್ತಿದೆ ಸರ್ಕಾರ. ನಮ್ಮ ಸೇವಾ ಭದ್ರತೆಯ ಬಗ್ಗೆ ತೀರ್ಮಾನಿಸದಿದ್ದರೆ ಉಗ್ರಹೋರಾಟ ಅನಿವಾರ್ಯ ಎಂದರು.
ಪ್ರತಿಭಟನೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಅತಿಥಿ ಉಪನ್ಯಾಸಕರಾದ ಕಾವ್ಯಾ, ಮಹಂತೇಶ್, ವಿಜಯಮ್ಮ, ನಂದೀಶ್, ನಾರಾಯಣಸ್ವಾಮಿ, ಮಹದೇವಯ್ಯ ಮತ್ತಿತರರು ನೇತೃತ್ವ ವಹಿಸಿದ್ದರು.
ಬಣಗುಡುತ್ತಿವೆ ಸರ್ಕಾರಿ ಪದವಿ ಕಾಲೇಜುಗಳು: ಜಿಲ್ಲೆಯ ಎಲ್ಲ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರನ್ನೇ ಅವಲಂಭಿಸಿದ್ದು, ಎಲ್ಲರೂ ಮುಷ್ಕರದಲ್ಲಿ ನಿರತರಾಗಿರುವ ಕಾರಣಕ್ಕೆ ಕಾಲೇಜುಗಳಲ್ಲಿ ಪಾಠ, ಪ್ರವಚನ ಸ್ಥಗಿತಗೊಂಡಿದೆ. ಕರೊನಾ ನೆಪ ಹಾಗೂ ಕಾಲೇಜುಗಳಲ್ಲಿ ಪಾಠವಿಲ್ಲದ ಕಾರಣಕ್ಕೆ ವಿದ್ಯಾರ್ಥಿಗಳು ಕಾಲೇಜುಗಳ ಕಡೆ ಬರುವುದನ್ನೇ ಬಿಟ್ಟಿದ್ದಾರೆ. ಈ ಪರಿಸ್ಥಿತಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮಾತ್ರವಿದ್ದು ಬಡವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಖಾಸಗಿ ಕಾಲೇಜುಗಳಲ್ಲಿ ಎಂದಿನಂತೆ ಶೈಕ್ಷಣಿಕ ಚಟುವಟಿಕೆ ನಡೆಯುತ್ತಿದ್ದು ವಿವಿ ಪರೀಕ್ಷೆ ಘೋಷಿಸಿದರೆ ಸರ್ಕಾರಿ ಕಾಲೇಜುಗಳಲ್ಲಿ ಬಡಮಕ್ಕಳಿಗೆ ಅನ್ಯಾಯವಾಗಲಿದೆ.