ವಿವಿಧ ಬೇಡಿಕೆ ಈಡೇರಿಕೆಗೆ ಪಟ್ಟು ;ರೈತ ಸಂಘದಿಂದ ಪ್ರತಿಭಟನೆ ; ಹೇಮೆ ಹರಿಸುವಲ್ಲಿ ರಾಜಕಾರಣಿಗಳ ಇಚ್ಛಾಸಕ್ತಿ ಕೊರತೆ

6 kunigal 1
????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಕುಣಿಗಲ್ : ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರೈತ ಸಂಘ, ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಹಾಬಲೇಶ್ವರ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ರವಾನಿಸಿದರು.

ತಾಲೂಕಿನ ಎಲ್ಲ ಕೆರೆಗಳಿಗೆ ಹೇಮಾವತಿ ನೀರು, ಮಂಗಳ, ಮಾರ್ಕೋನಹಳ್ಳಿ ಜಲಾಶಯದ ನಡುವೆ ಲಿಂಕ್ ಕೆನಾಲ್ ಕಾಮಗಾರಿ, ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ, ರೈತರಿಗೆ ಹಕ್ಕು ಪತ್ರ ನೀಡಿ ಪಹಣೆ ಹಾಗೂ ಖಾತೆ ಇರುವ ಜಮೀನುಗಳನ್ನು ಅಕ್ರಮವಾಗಿ ದೌರ್ಜನ್ಯದಿಂದ ವಶ ಪಡಿಸಿಕೊಳ್ಳಲು ಮುಂದಾಗಿರುವ ಅರಣ್ಯ ಇಲಾಖೆಯ ಧೋರಣೆ ಖಂಡಿಸಿ, ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್‌ಪಟೇಲ್, ತಾಲೂಕು ಅಧ್ಯಕ್ಷ ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸರಂಗಯ್ಯನಪಾಳ್ಯ ವೆಂಕಟೇಶ್ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.

ಜಿಲ್ಲಾಧ್ಯಕ್ಷ ಆನಂದ್‌ಪಟೇಲ್ ಮಾತನಾಡಿ, 2020-21 ನೇ ಸಾಲಿನಲ್ಲಿ ಜಿಲ್ಲೆಗೆ ಹರಿಯುವ ಹೇಮಾವತಿ ನೀರಿನಲ್ಲಿ ತಾಲೂಕಿಗೆ ಮೀಸಲಾಗಿರುವ 3.1 ಟಿ.ಎಂ.ಸಿ ನೀರಿನ ಪಾಲನ್ನು ಹೇಮಾವತಿ ಸಂಪರ್ಕವಿರುವ ಕೊತ್ತೆಗೆರೆ, ಗುನ್ನಾಗರೆ, ಅಡೋನಹಳ್ಳಿ, ಕಂಟನಹಳ್ಳಿ, ಮಡಿಕೆಕನ್ನಸಂದ್ರ, ಬೇಗೂರು, ಕುಣಿಗಲ್, ದೊಡ್ಡಕೆರೆ, ಚಿಕ್ಕಕೆರೆ, ಸಂಕೇನಪುರ ಆಣೆ ಕೆರೆಗಳು ಹಾಗೂ ಮಂಗಳ ಜಲಾಶಯ, ಮಾರ್ಕೋನಹಳ್ಳಿ ಜಲಾಶಯ ಸೇರಿ ತಾಲೂಕಿನ ಎಲ್ಲ ಕೆರೆಕಟ್ಟೆಗಳಿಗೆ ನೀರನ್ನು ಹರಿಸಬೇಕು. ಆದರೆ ಜಿಲ್ಲಾಡಳಿತದ ಬೇಜವಾಬ್ದಾರಿಯಿಂದಾಗಿ ಈವರೆಗೂ ಕೇವಲ 200 ಎಂಸಿಎಫ್‌ಟಿ ನೀರು ಮಾತ್ರ ಹಿರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾರ್ಕೋನಹಳ್ಳಿ ಜಲಾಶಯದಿಂದ ಹೆಚ್ಚಾದ ನೀರು ಶಿಂಷಾ ನದಿಯಲ್ಲಿ ಹರಿದು ಹೋಗುತ್ತಿದ್ದು, 20 ವರ್ಷಗಳಿಂದ 20 ಟಿಎಂಸಿ ನೀರು ನದಿ ಪಾಲಾಗಿದೆ, ಮಂಗಳಾ ಜಲಾಶಯದಲ್ಲಿ ಎಂಟು ವರ್ಷಗಳಿಂದ ನೀರಿಲ್ಲದೆ, ಪ್ರಾಣಿ, ಪಕ್ಷಿಗಳು, ಜನ ಜಾನುವಾರಗಳಿಗೆ ತೊಂದರೆಯಾಗಿದೆ. ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ಎಚ್.ಡಿ.ರಂಗನಾಥ್ ನೀರಾವರಿ ಯೋಜನೆಗೆ ಮೀಸಲಿಟ್ಟಿದ 80 ಕೋಟಿ ರೂಪಾಯಿಯನ್ನು ಜಿಪಂ ಹಾಗೂ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮಹಬಲೇಶ್ವರ ಸೂಕ್ತ ಕ್ರಮಕ್ಕಾಗಿ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಕಳಿಸಿಕೊಡುವುದಾಗಿ ಭರವಸೆ ನೀಡಿದರು.

ಕಂಬಕ್ಕೆ ಕಟ್ಟುತ್ತೇವೆ : ತಾಲೂಕಿನ ಎಲೆಕಡಕಲು, ಕಾಚನಹಳ್ಳಿ, ಬ್ಯಾಡರಹಳ್ಳಿ, ವೈ.ಕೆ.ದೊಡ್ಡಿ, ಕುಂಟಯ್ಯನಪಾಳ್ಯದ ರೈತರು ಸುಮಾರು 60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು, ಅನುಭವದಲ್ಲಿದ್ದು, ದಾಖಲೆ ಹೊಂದಿದರೂ ಹುಲಿಯೂರುದುರ್ಗ ವಲಯ ಅರಣ್ಯಾಧಿಕಾರಿಗಳು ಈ ಜಮೀನು ಅರಣ್ಯ ಇಲಾಖೆಗೆ ಸೇರಬೇಕೆಂದು ಅಲ್ಲಿ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿದ ಆನಂದ್‌ಪಟೇಲ್, ಇದಕ್ಕೆ ಕೈ ಹಾಕಿದರೆ ನಿಮ್ಮನು ಕಂಬಕ್ಕೆ ಕಟ್ಟಲಾಗುವುದೆಂದು ಆರ್‌ಎಫ್‌ಒ ಮಹಮದ್ ಮನ್ಸೂರ್ ಎದುರಿನಲ್ಲೇ ಎಚ್ಚರಿಕೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಎಫ್‌ಒ ಮಹಮದ್ ಮನ್ಸೂರ್, ಪಹಣಿ ಹಾಗೂ ಖಾತೆ ಇರುವ ಜಮೀನಲ್ಲಿ ವ್ಯವಸಾಯ ಮಾಡಲು ತಕರಾರಿಲ್ಲ, ಆದರೆ ರೈತರು ಜೆಸಿಬಿ ಯಂತ್ರ ಬಳಸಿ ಅರಣ್ಯ ಪ್ರದೇಶವನ್ನು ಮಟ್ಟ ಮಾಡಲು ಮುಂದಾದರೆ ಕ್ರಮಕೈಗೊಳ್ಳಲಾಗುವುದೆಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net