ಬಾಕಿ ವೇತನ ಬಿಡುಗಡೆಗೆ ಒತ್ತಾಯ ; ಬಿಸಿಯೂಟ ನೌಕರರ ಫೆಡರೇಷನ್ ಪ್ರತಿಭಟನೆ

AITUC protest (3)
Published on

ತುಮಕೂರು : ಬಿಸಿಯೂಟ ನೌಕರರಿಗೆ ತಡೆಹಿಡಿದಿರುವ ಜೂನ್ ಮತ್ತು ಜುಲೈ ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಇಡೀ ದೇಶದಾದ್ಯಂತ ಜಾರಿಗೆ ತರಬೇಕು ಎಂದು ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್(ಎಐಟಿಯುಸಿ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

2004ರಲ್ಲಿ ಸರ್ಕಾರ ಜಾರಿಗೆ ತಂದ ಅಕ್ಷರದಾಸೋಹ ಬಿಸಿಯೂಟ ಕಾರ್ಯಕ್ರಮ ದೇಶದಾದ್ಯಂತ ಜಾರಿಯಲ್ಲಿದೆ. ಎಐಟಿಯುಸಿ ನಿರಂತರ ಹೋರಾಟದ ಫಲವಾಗಿ ಇಂದು ಮುಖ್ಯ ಅಡುಗೆಯವರಿಗೆ 2700 ಮತ್ತು ಅಡುಗೆ ಸಹಾಯಕರಿಗೆ 2600 ರೂಪಾಯಿ ನೀಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿರುವ ಹೊತ್ತಿನಲ್ಲಿ ಕಡಿಮೆ ವೇತನದಲ್ಲಿ ಬದುಕು ನಡೆಸುವುದು ಕಷ್ಟವಾಗಿದೆ. ಅಲಹಾಬಾದ್ ಹೈಕೋರ್ಟ್ ನೀಡಿರುವ ಆದೇಶದಂತೆ ಕನಿಷ್ಠ ವೇತನ ಜಾರಿ ಅಗತ್ಯ ಎಂದು ಎಐಟಿಯುಸಿ ರಾಜ್ಯ ಸಲಹೆಗಾರ ಎನ್.ಶಿವಣ್ಣ ಒತ್ತಾಯಿಸಿದರು.

ಕರೊನಾ ಸಂದರ್ಭದಲ್ಲಿಯೂ ಬಿಸಿಯೂಟ ನೌಕರರು ಶಾಲೆಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಅವರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ಎಸಗುತ್ತಿದೆ. ಹಾಗಾಗಿ ಬಿಸಿಯೂಟ ತಯಾರಕರಿಗೂ ಕೋವಿಡ್ ಪರಿಹಾರ ದೊರೆಯಬೇಕೆಂಬುದು ಎಐಟಿಯುಸಿಯ ಒತ್ತಾಯವಾಗಿದೆ. ವಯಸ್ಸಿನ ನೆಪ ವಾಡಿಕೊಂಡು 60 ವರ್ಷ ದಾಟಿದ ಅಡುಗೆ ಕೆಲಸಗಾರರನ್ನು ನಿವೃತ್ತಿ ಉಪಧನವಿಲ್ಲದೆ ಕೆಲಸದಿಂದ ಕೈಬಿಡುತ್ತದೆ ಎಂದರು.

ಬಿಸಿಯೂಟ ತಯಾರಕರನ್ನು ಕಾಯಂಗೊಳಿಸಿ ಅವರಿಗೆ ಶಾಸನಬದ್ಧ ಹಕ್ಕುಗಳನ್ನು ನೀಡಬೇಕು ಎಂದು ನಮ್ಮ ಹೋರಾಟವಾಗಿದೆ. ಅಲ್ಲದೆ ಡಿ ಗ್ರೂಪ್ ನೌಕರರಿಲ್ಲದ ಶಾಲೆಗಳಲ್ಲಿ ಆ ಕೆಲಸ ಮಾಡುವ ಇದು ಅನುಕೂಲವಾಗಲಿದೆ ಎಂದು ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಉಪಾಧ್ಯಕ್ಷ ಕೆಂಬೇಗೌಡ ಒತ್ತಾಯಿಸಿದರು.

ಎಲ್‌ಐಸಿ ಆಧಾರಿತ ಪೆನ್ಷನ್, ಐದನೇ ತಾರೀಖಿಗೆ ಪ್ರತಿ ತಿಂಗಳ ವೇತನ ಬಿಡುಗಡೆ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಇದನ್ನು ಸರಕಾರ ಪರಿಗಣಿಸಿ ಈಡೇರಿಸಬೇಕೆಂದು ಮನವಿ ಸಲ್ಲಿಸಲಾಗುತ್ತಿದೆ ಎಂದರು. ನೂರಾರು ಸಿಬ್ಬಂದಿ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಡಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಪ್ರಧಾನ ಕಾರ್ಯದರ್ಶಿ ಗಿರೀಶ್, ಜಿಲ್ಲಾ ಸಂಚಾಲಕ ಕಾಂತರಾಜು, ವಿವಿಧ ತಾಲೂಕುಗಳ ಅಧ್ಯಕ್ಷರಾದ ವನಜಾಕ್ಷಮ್ಮ, ಸಾವಿತ್ರಮ್ಮ, ಉಮಾದೇವಿ, ನಾಗರತ್ನಮ್ಮ, ಉವಾದೇವಿ, ಪದ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net