ವಿಶೇಷ ಪ್ರೋತ್ಸಾಹ ಅಂಕ ನೀಡಿ ; ಡಿಸಿ ಕಚೇರಿ ಮುಂಭಾಗ ರೈತರು, ದಲಿತ ಮುಖಂಡರಿಂದ ಪ್ರತಿಭಟನೆ

03Tmk_Farmers_Protest
Published on

ತುಮಕೂರು : ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸಂದರ್ಭದಲ್ಲಿ ಆನ್‌ಲೈನ್ ಪಾಠ ವಂಚಿತ ರೈತರು, ದಲಿತರು, ಬಡವರ ಮಕ್ಕಳಿಗೆ ವಿಶೇಷ ಪ್ರೋತ್ಸಾಹ ಅಂಕ ನೀಡುವಂತೆ ಆಗ್ರಹಿಸಿ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಕರೊನಾ ಸಂಕಷ್ಟದಿಂದ 2019-20 ಮತ್ತು 2020-21ರಲ್ಲಿ ಗ್ರಾಮೀಣ ಭಾಗದ ಅದರಲ್ಲಿಯೂ ದಲಿತರು, ಬಡವರು, ರೈತರ ಮಕ್ಕಳು ಆನ್‌ಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಶೇ.20 ಮಕ್ಕಳಿಗೂ ಆನ್‌ಲೈನ್ ಶಿಕ್ಷಣ ಸಮರ್ಪಕವಾಗಿ ದೊರೆತಿಲ್ಲ. ಹಾಗಾಗಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ನೀಡುವಾಗ 2 ವರ್ಷಗಳ ಹಿಂದಿನ ಸರಾಸರಿ ಅಂಕಗಳ ಜತೆಗೆ ವಿಶೇಷ ಪ್ರೋತ್ಸಾಹ ಅಂಕಗಳನ್ನು ಈ ವರ್ಗಗಳ ವಿದ್ಯಾರ್ಥಿಗಳಿಗೆ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಕರೊನಾ 2ನೇ ಅಲೆ ಆರ್ಭಟದಿಂದ ಹಲವು ರಾಜ್ಯಗಳು ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಿದರೆ, ನಮ್ಮ ಶಿಕ್ಷಣ ಮಂತ್ರಿಗಳು ಹಠಕ್ಕೆ ಬಿದ್ದವರಂತೆ ಪರೀಕ್ಷೆ ನಡೆಸಿದರು. ಭೌತಿಕವಾಗಿ ಪಾಠ, ಪ್ರವಚನಗಳು ನಡೆಯದ ಕಾರಣ, ಆನ್‌ಲೈನ್ ಕಲಿಕೆಯನ್ನೇ ಮುಂದಿಟ್ಟುಕೊಂಡು ಪರೀಕ್ಷೆ ನಡೆಸಿದ್ದಾರೆ. ಮೊಬೈಲ್, ಲ್ಯಾಪ್‌ಟಾಪ್ ಕೊಳ್ಳಲು ಶಕ್ತಿ ಇಲ್ಲದ ದಲಿತರು, ಬಡವರು, ರೈತರ ಮಕ್ಕಳ ಕಲಿಕೆಗೆ ಇದರಿಂದ ಅನ್ಯಾಯವಾಗಿದೆ. ಇಂತಹ ಮಕ್ಕಳಿಗೆ ಪ್ರೋತ್ಸಾಹ ಅಂಕ ನೀಡುವಂತೆ ಆಗ್ರಹಿಸಿದರು.

ಮುಖಂಡರಾದ ರವೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಪಾವಗಡದ ಪೂಜಾರಪ್ಪ , ಗುಬ್ಬಿ ಲೋಕೇಶ್, ವೆಂಕಟೇಗೌಡ, ಕಾಳೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

ವಿದ್ಯುತ್ ತಿದ್ದುಪಡಿ ಕಾಯ್ದೆ : ಜನಸಾಮಾನ್ಯರು, ಬಳಕೆದಾರರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುವ ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ತಂದು ವಿದ್ಯುತ್ ಸರಬರಾಜನ್ನು ಖಾಸಗಿಯವರಿಗೆ ವಹಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಹರಿಹಾಯ್ದರು.

ಒಂದು ವೇಳೆ ವಿದ್ಯುತ್ ತಿದ್ದುಪಡಿ ಕಾಯ್ದೆ ಜಾರಿಗೆ ಬಂದರೆ ಇದುವರೆಗು ಉಚಿತ ವಿದ್ಯುತ್ ಪಡೆಯುತ್ತಿರುವ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್‌ಮೀಟರ್ ಅಳವಡಿಕೆಯಾಗಲಿದೆ.ಅಲ್ಲದೆ, ಮನೆ ಬಳಕೆಯ ವಿದ್ಯುತ್ ದರವು 2-3ಪಟ್ಟು ಹೆಚ್ಚಾಗಲಿದೆ. ಹಾಗಾಗಿ ಸಂಸತ್ತಿನಲ್ಲಿ ವಿದ್ಯುತ್ ತಿದ್ದುಪಡಿ ಕಾಯ್ದೆ ಅಂಗೀಕಾರ ಮಾಡಬಾರದೆಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net