

ಬೆಳಗಾವಿ: ವೇತನ ಜಮೆಯಾಗದ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಗ್ರಂಥಪಾಲಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅರಿವು ಕೇಂದ್ರ ಗ್ರಾಪಂ ಗ್ರಂಥಪಾಲಯ ಹಾಗೂ ಮಾಹಿತಿ ಕೇಂದ್ರ ನೌಕರರ ಸಂಘ ಆಗ್ರಹಿಸಿದೆ.
ನಗರದ ಜಿಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ಕೈಗೊಂಡು, ಈ ಸಂಬಂಧ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು.
ಈಚೆಗೆ ಕಲಬುರ್ಗಿ ಜಿಲ್ಲೆಯಲ್ಲಿ ಭಾಗ್ಯವತಿ ಎಂಬ ಗ್ರಂಥಾಪಲಕಿ ವೇತನವಿಲ್ಲದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲಿಯೇ ಅ.28ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಳಲುಘಟ್ಟ ಗ್ರಾಪಂ ಅರಿವು ಕೇಂದ್ರದ ಗ್ರಂಥಪಾಲಕ ರಾಮಚಂದ್ರಯ್ಯ ಕಳೆದ ಮೂರು ತಿಂಗಳಿನಿಂದ ಸಂಬಳವಿಲ್ಲದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡೂ ಕುಟುಂಬಗಳಿಗೆ ಸರ್ಕಾರ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು. ಈ ರೀತಿಯ ಘಟನೆಗಳು ಮರುಕಳುಹಿಸದಂತೆ ಕನಿಷ್ಠ ವೇತನ, ವ್ಯತ್ಯಾಸದ ಮೊತ್ತ, ತುಟ್ಟಿ ಭತ್ಯೆಯನ್ನು ನೇರವಾಗಿ ಗ್ರಂಥಪಾಲಕರ ಖಾತೆಗಳಿಗೆ ಪ್ರತಿ ತಿಂಗಳ ದಿ.5ರೊಳಗೆ ಜಮೆಯಾಗುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡರು.
ಸಂಘದ ರಾಜ್ಯ ಉಪಾಧ್ಯಕ್ಷ ಸದಾನಂದ ಪೂಜಾರಿ, ತುಕಾರಾಮ ಜಯನಾಚೆ, ರುದ್ರೇಶ ಸಂಪಗಾವಿ, ಶಿವನಗೌಡ ಪಾಟೀಲ, ತಾತ್ಯಾಸಾಹೇಬ ಕೊರವಿ, ಕಲ್ಲಪ್ಪ ಕಾಂಬಳೆ, ಸಂಜಯ ಮಾದರ, ಮಧುಮತಿ ಪಾಟೀಲ, ಯೋಗಿತಾ ಜಗತಾಪ, ರೇಷ್ಮಾ ಸುತಾರ, ಮೀನಾಕ್ಷಿ ಮುರಗೋಡ, ಪೂಜಾ ಗಾವಕರ ಇತರರಿದ್ದರು.