ಹೋರಾಟಗಾರರಿಂದ ಹೈಡ್ರಾಮಾ, ಧರಣಿ : ಹಲವರು ಪೊಲೀಸ್ ವಶ : ಪ್ರತಿಭಟನೆಗೆ ಅವಕಾಶ ನಕಾರ

New Project (1)
Published on

ಮಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಮತ್ತು ಸೌಜನ್ಯಾ ಹೋರಾಟಗಾರರ ವಿರುದ್ಧದ ಎಲ್ಲ ಸುಳ್ಳು ಕೇಸ್ ವಾಪಸ್ ಪಡೆಯುವಂತೆ ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲು ಬಂದಿದ್ದ ರಾಷ್ಟ್ರೀಯ ಹಿಂದು ಜಾಗರಣಾ ವೇದಿಕೆಯ ಹಲವು ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಕಾರ್ಯಕರ್ತರು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಜಮಾಯಿಸಿದ್ದರು. ಗಡಿಪಾರು ವಿಚಾರ ಹೈಕೋರ್ಟ್‌ನಲ್ಲಿದೆ. ಯಾವುದೇ ಕಾರಣಕ್ಕೂ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ಇನ್‌ಸ್ಪೆಕ್ಟರ್ ಎಚ್ಚರಿಕೆ ನೀಡಿದರು. ಆದರೂ ಗುಂಪುಗೂಡಿದ್ದರಿಂದ ವೇದಿಕೆ ಪ್ರಮುಖರನ್ನು ಪೊಲೀಸ್ ವಶಕ್ಕೆ ಪಡೆದರು. ಬೆಳ್ತಂಗಡಿ ತಾಲೂಕು ಕಚೇರಿ ಎದುರು ಬಿಗು ಪೊಲೀಸ್ ಭದ್ರತೆ ಹಾಕಲಾಗಿತ್ತು.

ಈ ನಡುವೆ ಪ್ರಸನ್ನ ರವಿ ನೇತೃತ್ವದಲ್ಲಿ ತಹಸೀಲ್ದಾರ್‌ಗೆ ಮನವಿ ಕೊಡಲು ಸೌಜನ್ಯಾ ಪರ ಹೋರಾಟಗಾರರೂ ಆಗಮಿಸಿದ್ದರು. ಸೌಜನ್ಯಾ ತಾಯಿ ಕುಸುಮಾವತಿ, ತಿಮರೋಡಿ ಸಹೋದರ ಮೋಹನ್ ಕುಮಾರ್ ಶೆಟ್ಟಿ ಜತೆಗಿದ್ದರು. ಅವರನ್ನು ತಾಲೂಕು ಕಚೇರಿ ಎದುರು ತಡೆದ ಪೊಲೀಸರು ಮನವಿ ಕೊಡಲು ಅವಕಾಶ ಕೊಡಲಾಗದು ಎಂದು ತಿಳಿಸಿದ್ದು, ಈ ವೇಳೆ ಹೋರಾಟಗಾರರು ಹಾಗೂ ಪೊಲೀಸರ ಮದ್ಯೆ ವಾಗ್ವಾದ ನಡೆಯಿತು.

ನಮ್ಮನ್ನು ಎನ್‌ಕೌಂಟರ್ ಮಾಡಿ, ಇಲ್ಲ ಮನವಿ ಕೊಡಲು ಬಿಡಿ ಎಂದು ಸೌಜನ್ಯಾ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿ ತಾಲೂಕು ಕಚೇರಿ ಮುಂಭಾಗ ಧರಣಿ ಕೂತರು. ಕೊನೆಗೆ ಐವರು ಹೋರಾಟಗಾರರಿಗೆ ತಹಸೀಲ್ದಾರ್ ಕಚೇರಿಗೆ ತೆರಳಲು ಅವಕಾಶ ಮಾಡಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net