ಮಹಿಳೋದಯ ಮಹಿಳಾ ಒಕ್ಕೂಟ ವತಿಯಿಂದ ಪ್ರತಿಭಟನೆ

protest
Published on

ಮಡಿಕೇರಿ:

ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪಿಗಳಿಗೆ ಜಾಮೀನು ನೀಡದೆ, ಕಠಿಣ ಶಿಕ್ಷೆ ಒದಗಿಸುವುದು, ಪಿಂಚಣಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಹಿಳೋದಯ ಮಹಿಳಾ ಒಕ್ಕೂಟ ವತಿಯಿಂದ ಮಡಿಕೇರಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಮಾತನಾಡಿದ ಮಹಿಳೋದಯ ಮಹಿಳಾ ಒಕ್ಕೂಟ ಜಿಲ್ಲಾ ವಲಯ ಸಂಯೋಜಕಿ ಜಾಯ್ಸ್ ಮೆನೆಜಸ್, ನಮ್ಮ ದೇಶದ ಉದ್ದಗಲಕ್ಕೂ ಪ್ರತಿದಿನ, ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರಗಳು, ಲೈಗಿಂಕ ಕಿರುಕುಳ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗುತ್ತಾ ಇರುವುದು ಆಘಾತಕಾರಿ ವಿಷಯವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ರಕ್ಷಣೆಗೆ ಹಲವಾರು ಯೋಜನೆಗಳನ್ನು, ಕಾನೂನುಗಳನ್ನು ರೂಪಿಸಿದ್ದರೂ ಕಾರ್ಯನಿರ್ವಹಣೆಯಲ್ಲಿ ವಿಫಲರಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನು ರೂಪಿಸುವುದು ಮಾತ್ರವಲ್ಲ, ಅದನ್ನು ಅನುಷ್ಠಾನಗೊಳಿಸುವುದು ಅಷ್ಟೆ ಮುಖ್ಯವಾಗಿದೆ. ಮಹಿಳೆಯರ ರಕ್ಷಣೆ, ಹಕ್ಕುಗಳಿಗಾಗಿ ಮಹಿಳೋದಯ ಮಹಿಳಾ ಒಕ್ಕೂಟ ಗ್ರಾಮ ಮಟ್ಟದಿಂದ ಕೇಂದ್ರ ಮಟ್ಟದವರೆಗೆ ಮಹಿಳೆಯರ ಸುರಕ್ಷತೆಗೆ ಸೂಕ್ತ ಕ್ರಮ ಜಾರಿಗೊಳಿಸಲು ಹಕ್ಕೊತ್ತಾಯ ಮನವಿ ಮಾಡುತಿದ್ದೇವೆ. ಪ್ರಸ್ತುತ ಕರ್ನಾಟಕ ಸರ್ಕಾರ ದುರ್ಬಲ ಗುಂಪುಗಳಿಗೆ ವಿಧವಾ ಪಿಂಚಣಿ, ವೃದ್ದಾಪ್ಯ ಪಿಂಚಣಿ ಮತ್ತು ವಿಶೇಷಚೇತನರಿಗೆ ಪಿಂಚಣಿ ನೀಡುತ್ತಿದ್ದು, ಸದರಿ ಯೋಜನೆಗಳಿಗೆ ತಿಂಗಳಿಗೆ 800ರಿಂದ 1200 ರೂ. ಸಂದಾಯ ಮಾಡುತ್ತಿದೆ. ಇತ್ತೀಚೆಗೆ ಜನರ ದೈನಂದಿನ ದಿನ ಬಳಕೆಯ ವಸ್ತುಗಳ ಬೆಲೆ ತುಂಬಾ ದುಬಾರಿಯಾಗಿರುವುದರಿಂದ ಈ ಮೊತ್ತವನ್ನು ಕನಿಷ್ಠ 3 ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.

ಒಕ್ಕೂಟ ಅಧ್ಯಕ್ಷೆ ತಾರಾ, ಸಾಂತ್ವನ ಕೇಂದ್ರ ಒಡಿಪಿಯ ವಿಲ್ಮಾ, ಶ್ವೇತಾ, ಪ್ರಮುಖರಾದ ವಿಜಯ ನಾರಾಯಣ್, ಮಮತಾ, ರೀಟಾ, ಧನುಕುಮಾರ್, ಅಕ್ಷಯ್, ಮೀನಾಕುಮಾರಿ, ಚಿನ್ನಮ್ಮ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net