

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ದೇವನಹಳ್ಳಿಯಿಂದ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಾಗುವ ಮಾರ್ಗಮಧ್ಯದ ಬೂದಿಗೆ ರಸ್ತೆ ಗುಂಡಿಗಳಿಂದ ಅಪಾಯಕಾರಿ ವಲಯವಾಗಿದೆ ಕೂಡಲೇ ರಸ್ತೆ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿ ಬೂದಿಗೆರೆ ಸೇರಿ ಸುತ್ತಮುತ್ತಲ ಗ್ರಾಮಸ್ಥರು ಬುಧವಾರ ಏರ್‌ಪೋರ್ಟ್ ಮಾರ್ಗದ ರಸ್ತೆ ತಡೆದು ಪ್ರತಿಭಟಿಸಿದರು.
ಬೂದಿಗೆರೆ, ಹಿತ್ತರಹಳ್ಳಿ, ಹಂದರಹಳ್ಳಿ, ಮಂಚಪ್ಪನಹಳ್ಳಿ, ಸಿಂಗಹಳ್ಳಿ, ಭಟ್ಟರವಾರೇನಹಳ್ಳಿ, ಹೊಸಹಳ್ಳಿ, ಅರೇಬನ್ನಿಮಂಗಲ, ಕೊಂಡೇನಹಳ್ಳಿ, ಗಂಗವಾರ, ಚೌಡಪ್ಪನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಏಳೆಂಟು ವರ್ಷಗಳಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ ಇದು ಪೂರ್ಣಗೊಳ್ಳುವ ಲಕ್ಷಣವೇ ಇಲ್ಲ, ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ, ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.
ಉಗ್ರರೂಪ ಪಡೆಯಲಿದೆ: ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ, ಕಳೆದ ಏಳೆಂಟು ವರ್ಷಗಳಿಂದ ರಸ್ತೆ ಅಪಘಾತದಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಆದ್ದರಿಂದ ಪ್ರತಿಭಟನೆ ಹಮ್ಮಿಕೊಂಢಿದ್ದು ಈ ಪ್ರತಿಭಟನೆ ಮುಂದಿನ ದಿನಗಳಲ್ಲಿ ಉಗ್ರರೂಪ ಪಡೆಯಲಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್ ಎಚ್ಚರಿಕೆ ನೀಡಿದರು.ಬೂದಿಗೆರೆ ಕ್ರಾಸ್ ನಿಂದ ಮೈಲನಹಳ್ಳಿವರೆಗೆ ರಸ್ತೆ ಕಾಮಗಾರಿ ಅಧ್ವಾನವಾಗಿದ್ದು ದಿನನಿತ್ಯ ಸಂಭವಿಸುತ್ತಿರುವ ಅಪಘಾತಗಳಿಂದ ಗ್ರಾಮಸ್ಥರು ರೋಸಿಹೋಗಿದ್ದಾರೆ ಎಂದು ಹೇಳಿದರು. ರಸ್ತೆ ಅಭಿವದ್ಧಿ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ. ಉಸ್ತುವಾರಿ ಸಚಿವರು ಕ್ಷೇತ್ರದ ಶಾಸಕರೂ ಆಗಿರುವ ಮುನಿಯಪ್ಪ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ ಅಧಿಕಾರಿಗಳು ನೆಪ ಹೇಳಿಕೊಂಡು ಹೋಗುತ್ತಿದ್ದಾರೆ ಹೊರತು ಯಾರೂ ಸ್ಪಂದಿಸುತ್ತಿಲ್ಲ ಎಂದು ಜೆಸಿಬಿ ಬಾಬು ಆಕ್ರೋಶ ವ್ಯಕ್ತಪಡಿಸಿದರು.ಅಧಿಕಾರಿಗಳು ಕಣ್ಣೀರು ಒರೆಸುವ ಕೆಲಸ ವಾಡುತ್ತಿದ್ದಾರೆ 2023ರಲ್ಲಿ ಇದೇ ರೀತಿ ಅಧಿಕಾರಿಗಳು 3ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದರು. ಆ ಭರವಸೆ ಮೇಲೆ ಪ್ರತಿಭಟನೆ ಹಿಂಪಡೆದಿದ್ದೇವು. ಇದುವರೆಗೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಮೂರ್ತಿ ಆರೋಪಿಸಿದರು.
ಟ್ರಾಫಿಕ್‌ಜಾಮ್:
ರಸ್ತೆ ತಡೆ ನಡೆಸಿ ಪ್ರತಿಭಟನೆ ಹಿನ್ನೆಲೆಯಲ್ಲಿ ಕಿ.ಮೀಗಟ್ಟಲೆ ಸಂಚಾರ ಸಿಕ್ಕು ಏರ್ಪಟ್ಟಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಪ್ರತಿಭಟನಕಾರರನ್ನು ತೆರವುಗೊಳಿಸಲು ಹರಸಾಹಸ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಪ್ರತಿಭಟನಕಾರರೊಂದಿಗೆ ಸಂಧಾನ ಮಾತುಕತೆ ನಡೆಸಿ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.