ನ್ಯಾಯಮೂರ್ತಿ ಮೇಲೆ ಶೂ ಎಸೆತ ಖಂಡಿಸಿ ಪ್ರತಿಭಟನೆ

13ss1Rajasekar maatu
ನ್ಯಾಯಮೂರ್ತಿ ಮೇಲೆ ವಕೀಲ ಶೂ ಎಸೆತ ಪ್ರಕರಣ ಖಂಡಿಸಿ ಶನಿವಾರಸಂತೆ ಡಿಎಸ್‌ಎಸ್ ವತಿಯಿಂದ ಪಟ್ಟಣದ ನಾಡ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
Published on

ಶನಿವಾರಸಂತೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದಿರುವುದು ಸಂವಿಧಾನಕ್ಕೆ ಮಾಡಿರುವ ಅವಮಾನ ಮತ್ತು ಭಯೋತ್ಪಾದನೆಗಿಂತ ಹೇಯ ಕೃತ್ಯವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ರಾಜ್ಯ ದಸಂಸ ಸಂಘಟನಾ ಸಂಯೋಜಕ ರಾಜಶೇಖರ್ ಆಗ್ರಹಿಸಿದರು.

ಪ್ರಕರಣ ಖಂಡಿಸಿ ದಸಂಸ ಜಿಲ್ಲಾ ಸಮಿತಿ ವತಿಯಿಂದ ಶನಿವಾರಸಂತೆ ಕಂದಾಯ ಇಲಾಖೆಯ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಶೂ ಎಸೆದಿರುವ ಆರೋಪಿ ರಾಕೇಶ್ ಕಿಶೋರ್ ಒಬ್ಬ ಜಾತಿವಾದಿ, ಕೋಮುವಾದಿ ಮತ್ತು ಸಂವಿಧಾನ ವಿರೋಧಿ. ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ದಲಿತರಾಗಿರುವುದನ್ನು ಸಹಿಸದೆ ಅವರ ಮೇಲೆ ಶೂ ಎಸೆದು ಅವಮಾನ ಮಾಡಿರುವುದನ್ನು ದೇಶದ ಪ್ರಜೆಗಳು ಯಾವತ್ತೂ ಕ್ಷಮಿಸುವುದಿಲ್ಲ. ಹೇಯ ಕೃತ್ಯ ಎಸಗಿರುವ ಈತನಿಗೆ ಉಗ್ರ ಶಿಕ್ಷೆ ವಿಧಿಸಿಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ದಸಂಸ ಜಿಲ್ಲಾ ಸಂಯೋಜಕ ಎಂ.ಎನ್.ರಾಜಪ್ಪ ಮಾತನಾಡಿ, ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆದು ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡಿರುವ ಮತ್ತು ಕ್ಷಮೆಗೆ ಅನರ್ಹನಾಗಿರುವ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಶನಿವಾರಸಂತೆ ನಾಡ ಕಚೇರಿಯ ಡಿ.ಟಿ.ಮಧುಸೂದನ್ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ದಸಂಸ ಜಿಲ್ಲಾ ಕಾರ್ಯದರ್ಶಿ ಪೊನ್ನಪ್ಪ, ತಾಲೂಕು ಸಂಚಾಲಕ ಚಂದ್ರಶೇಖರ್, ಜಿಲ್ಲಾ ಸಮಿತಿ ಸಲಹೆಗಾರ ಎಂ.ಆರ್.ಮಲ್ಲೇಶ್, ಪ್ರಮುಖರಾದ ದಯಾಕರ್, ಸಿದ್ದಯ್ಯ, ಹೇಮಾವತಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net