

ಶ್ರೀರಂಗಪಟ್ಟಣ: ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರ ಕಡೆಗೆ ಶೂ ಎಸೆದ ವಕೀಲನನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಭಾರತದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಜಮಾವಣೆಗೊಂಡ ದಲಿತ, ರೈತ, ಅಂಬೇಡ್ಕರ್ ಹಾಗೂ ಮುಸ್ಲಿಂ ಸೌರ್ಹದ ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೆಲಕಾಲ ರಸ್ತೆ ತಡೆ ನಡೆಸಿ ಬಳಿಕ ತಾಲೂಕು ಕಚೇರಿವರೆಗೂ ಬೈಕ್ ರ‌್ಯಾಲಿ ಮೂಲಕ ತೆರಳಿ ಧರಣಿ ನಡೆಸಿ ಆಕ್ರೋಶ ಹೊರಹಾಕಿದರು.
ರೈತ ಮುಖಂಡ ಪಾಂಡು ಮಾತನಾಡಿ, ದೇಶದ ಇತಿಹಾಸದಲ್ಲಿ ಹಿಂದೆಂದೂ ಕಾಣದಂತಹ ದಾಳಿಯ ಪ್ರಯತ್ನ ಇದಾಗಿದ್ದು, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ ಪ್ರಕರಣ ಪ್ರಜಾತಂತ್ರ ಹಾಗೂ ಭಾರತೀಯ ನ್ಯಾಯಾಂಗ ವ್ಯವಸ್ಥೆ ಮೇಲೆ ನಡೆಸಿದ ಹೀನಕೃತ್ಯಗಿದ್ದು, ಇದನ್ನು ಕ್ಷಮಿಸುವ ಅವಕಾಶವನ್ನೇ ನೀಡದೆ ಸೂಕ್ತ ಶಿಕ್ಷೆಗೆ ಒಳಪಡಿಸಬೇಕು. ದೇಶದ ನ್ಯಾಯಾಂಗ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿರುವ ಈತನನ್ನು ಯಾವುದೇ ನ್ಯಾಯಾಲಯಗಳ ಕಲಾಪಗಳಲ್ಲಿ ಭಾಗಿಯಾಗುವ ಅವಕಾಶ ನೀಡದೆ ಕೂಡಲೇ ಬಂಧಿಸಬೇಕು ಹಾಗೂ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರಜ್ಞಾವಂತ ವೇದಿಕೆಯ ಅಧ್ಯಕ್ಷ ಹಾಗೂ ವಕೀಲ ಸಿ.ಎಸ್.ವೆಂಕಟೇಶ್ ಮಾತನಾಡಿ, ರಾಕೇಶ್ ಕಿಶೋರ್ ಅವರು ಓರ್ವ ನ್ಯಾಯವಾದಿಯಾಗಿ ನ್ಯಾಯಾಮೂರ್ತಿಗಳ ಹೇಳಿಕೆಗೆ ಕಾನೂನು ರೀತಿ-ನೀತಿಯಲ್ಲಿ ವಿರೋಧಿಸುವ ಬದಲು ಮನುವಾದಿಗಳಂತೆ ವರ್ತಿಸಿರುವುದು ಭಾರತದ ನ್ಯಾಯಾಂಗ ವ್ಯವಸ್ಥೆ ಮಾಡಿದ ಅಪಮಾನ. ಇಂತಹ ಕೃತ್ಯಗಳು ದೇಶದಲ್ಲಿ ಪುನಾರವರ್ತನೆಗೊಳ್ಳದಂತೆ ಒಂದು ನಿದರ್ಶನವಾಗಲು ಕೃತ್ಯ ಎಸಗಿದ ರಾಕೇಶ್ ಕಿಶೋರ್ ಅವರಿಗೆ ಸಂವಿಧಾನ ವ್ಯವಸ್ಥೆಯಲ್ಲಿ ಶಿಕ್ಷೆಯಾಗಬೇಕು ಎಂದರು.
ಬಳಿಕ ತಮ್ಮ ಬೇಡಿಕೆಗಳಿರುವ ಮನವಿ ಪತ್ರವನ್ನು ಶಿರಸ್ತೇದಾರ್ ಪ್ರಸನ್ನ ಕುಮಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ರವಾನಿಸಿದರು. ಪ್ರೊ.ಇಲಿಯಾಸ್ ಅಹಮದ್, ಏಜಾಜ್ ಪಾಷ, ಪ್ರಜ್ಞಾವಂತ ವೇದಿಕೆಯ ಚಿಕ್ಕತಮ್ಮೇಗೌಡ, ರೈತ ಮುಖಂಡರಾದ ಮರಳಗಾಲ ಕೃಷ್ಣೇಗೌಡ, ನಾಗೇಂದ್ರ, ಚಂದ್ರಶೇಖರ್, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಕೆ.ಶೆಟ್ಟಹಳ್ಳಿ, ಗಂಗಾಧರ್, ಗಂಜಾಂ ರವಿಚಂದ್ರ, ಗಂಜಾಂ ಹೊನ್ನಪ್ಪ, ಸೋಮೇಶ್, ಮಹದೇವಸ್ವಾಮಿ, ಮುಂಡುಗದೊರೆ ಮೋಹನ್, ಶೆಟ್ಟಹಳ್ಳಿ ಸುರೇಶ್, ಉಮೇಶ್, ಕಲಾವತಿ, ಶ್ವೇತಾ ಇತರರು ಹಾಜರಿದ್ದರು.