

ತಿ.ನರಸೀಪುರ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಚಪ್ಪಲಿ ಎಸೆಯಲು ಯತ್ನಿಸಿದ ವಕೀಲನನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಮುಖಂಡರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ತಾಲೂಕು ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಮಾತನಾಡಿ, ನ್ಯಾಯಾಲಯದ ಕಲಾಪದ ವೇಳೆ ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಮಾಡಿರುವುದು ಅಕ್ಷಮ್ಯ. ನ್ಯಾಯಾಲಯದ ಘನತೆ ಹಾಗೂ ನ್ಯಾಯಾಧೀಶರ ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಆರೋಪಿಗೆ ಶಿಕ್ಷೆ ವಿಧಿಸಬೇಕು ಎಂದರು.
ಮುಖಂಡ ಆಲಗೂಡು ಚಂದ್ರಶೇಖರ್ ಮಾತನಾಡಿದರು. ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ ಮೂರ್ತಿ, ತಾ.ಪಂ ಮಾಜಿ ಸದಸ್ಯ ಎಂ.ಎಸ್.ಬಸವರಾಜು, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಸ್.ಕೆ. ಶಿವಕುಮಾರ್ ಇತರರು ಇದ್ದರು.