

ಸರಗೂರು: ನಕಲಿ ಸಹಿ ಬಳಸಿ, ಲಕ್ಷಾಂತರ ರೂ. ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ಪಟ್ಟಣದ ಒಂದನೇ ಮುಖ್ಯ ರಸ್ತೆಯ ಎಸ್‌ಬಿಐ ಬ್ಯಾಂಕ್ ಕಚೇರಿ ಪಕ್ಕದಲ್ಲಿರುವ ಅಂಚೆ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದ ಖಾತೆದಾರರು, ಕಚೇರಿಗೆ ಬೀಗ ಜಡಿದು ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.
ಅಂಚೆ ಶಾಖಾ ಪಾಲಕ(ಪೋಸ್ಟಲ್ ಆಸಿಸ್ಟೆಂಟ್) ದೀಪಕ್ ಎಂಬುವವರು ಕಚೇರಿಯ ವಿವಿಧ ಖಾತೆಗಳಿಂದ ನಕಲಿ ಸಹಿ ಬಳಸಿ, ಲಕ್ಷಾಂತರ ರೂ. ಲೂಟಿ ಮಾಡಿದ್ದಾರೆ ಎಂದು ಹಣ ಕಳೆದುಕೊಂಡ ಖಾತೆದಾರರು ದೂರಿದ್ದಾರೆ. ಪ್ರಕರಣ ಬೆಳಕಿಗೆ ಬಂದು ಹಲವು ತಿಂಗಳು ಕಳೆದಿವೆ. ಹಣ ಲಪಟಾಯಿಸಿರುವವರ ವಿರುದ್ಧ ದೂರು ನೀಡಿದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಅಂಚೆ ಕಚೇರಿಯ ಉಳಿತಾಯ ಖಾತೆಯಿಂದ ನಕಲಿ ಸಹಿ ಮಾಡಿ ಹಣ ಪಡೆದಿದ್ದಾರೆ. ಅದಲ್ಲದೆ ಗ್ಯಾರಂಟಿ ಯೋಜನೆ ಹಣವನ್ನು ಖಾತೆದಾರರಿಂದ ಹಣ ಜಮಾ ಮಾಡಲು ತೆಗೆದುಕೊಂಡು ಅದನ್ನು ಸಹ ಬಳಸಿಕೊಂಡು ಖಾತೆದಾರರ ಪುಸ್ತಕದಲ್ಲಿ ಮುದ್ರೆ ಹಾಕಿ ಸಹಿ ಮಾಡಿ ಕೊಟ್ಟಿದ್ದಾರೆ. ಆದರೆ ಈ ಕುರಿತು ಕಚೇರಿಯ ಪುಸ್ತಕದಲ್ಲಿ ಯಾವುದೇ ವಿವರ ನಮೂದು ಮಾಡಿಲ್ಲ. ಇದನ್ನು ಪ್ರಶ್ನಿಸಿದರೆ ಅಂಚೆ ಕಚೇರಿಯ ಅಧಿಕಾರಿಗಳು ಕೆಲವೊಂದು ಫಾರಂಗೆ ಸಹಿ ಮಾಡಿಸಿಕೊಂಡು ವಾರ ಬಿಟ್ಟು ಬನ್ನಿ ಎಂದು ಸಾಬೂಬು ಹೇಳುತ್ತಿದ್ದಾರೆ. ಸರ್ವರ್ ಸಮಸ್ಯೆ ಇದ್ದು, ನಾಳೆ ಬನ್ನಿ ಎಂದು ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಖಾತೆದಾರರಿಗೆ ಅವರ ಠೇವಣಿ ಹಣವನ್ನು ಬಡ್ಡಿ ಸಮೇತ ಕೊಡಿಸಬೇಕು. ನಕಲಿ ಸಹಿ ಮಾಡಿ ಕೋಟ್ಯಂತರ ರೂ. ದೋಚಿರುವ ವ್ಯಕ್ತಿಗಳು, ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಒಬ್ಬ ವ್ಯಕ್ತಿಯನ್ನು ನೋಡಿ ಹಣ ಕಟ್ಟಿರುವುದಿಲ್ಲ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಪೋಸ್ಟ್ ಆಫೀಸ್ ನಂಬಿ ಹಣ ಕಟ್ಟಿದ್ದಾರೆ. ಮದುವೆ, ಶುಭ ಕಾರ್ಯಗಳಿಗೆ ಹಣ ಇಟ್ಟಿದ್ದು, ಈಗ ಅದು ಇಲ್ಲವಾಗಿದೆ. ಈ ಹಣ ನಮಗೆ ಬರದೇ ಇದ್ದರೆ ನಾವುಗಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೆಲ ಗ್ರಾಹಕರು ಎಚ್ಚರಿಕೆ ನೀಡಿದರು.
ಈ ಸಂಬಂಧ ಸರಗೂರು ಅಂಚೆ ಕಚೇರಿಯಲ್ಲಿ ಕೆಲ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟಿದ್ದಾರೆ. ಈ ಸಂಬಂಧ ಮೈಸೂರು ಜಿಲ್ಲೆಯ ಅಂಚೆ ಕಚೇರಿಯ ಹಲವಾರು ಸಿಬ್ಬಂದಿ ಸರಗೂರಿನ ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಲ್ಲಿನ ಮನೆ ಮನೆಗೆ ಹೋಗಿ ನಿಮ್ಮ ಖಾತೆಗಳನ್ನು ದೃಢಪಡಿಸಿಕೊಳ್ಳಿ ಎಂದು ಮಾಹಿತಿ ನೀಡಿ ಸುಮಾರು ನಾಲ್ಕು ತಿಂಗಳು ಕಳೆದರೂ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಖಾತೆದಾರರಾದ ಮುಳ್ಳೂರು ಲೋಕೇಶ್, ಮೆಡಿಕಲ್ ನೀತಿನ್ ಕುಮಾರ್, ಸರಗೂರು ಲೋಕೇಶ್, ಸುಂದರಮ್ಮ, ರಾಜೇಶ್, ನಾಗರಾಜ್, ಚೌಡಶೆಟ್ಟಿ, ಮಹೇಶ್, ವೆಂಕಟೇಶ್, ಅನಂತ ಶಯನ, ಜಯಮ್ಮ, ಸರೋಜಮ್ಮ, ಜಿ.ಬಿ.ಶಶಿಕಲಾ, ಜಗದೀಶ್, ನೊಂದ ಗ್ರಾಹಕರು ಭಾಗವಹಿಸಿದ್ದರು.