

ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿಯಲ್ಲಿ ಹಿಂದು ರುದ್ರಭೂಮಿಯನ್ನು ತ್ಯಾಜ್ಯ ಸಂಗ್ರಹ ಕೇಂದ್ರವಾಗಿಸುವ ಗ್ರಾಪಂ ಆಡಳಿತದ ವಿರುದ್ಧ ಸೋಮವಾರ ಪ್ರತಿಭಟನೆ ನಡೆಯಿತು.
ಪುದುಕೋಳಿಯಲ್ಲಿ ದಶಕಗಳಿಂದ ಕಾರ್ಯಾಚರಿಸುವ ಹಿಂದು ರುದ್ರಭೂಮಿ ನಿವೇಶನದೊಳಗೆ ಕೆಲವು ದಿನಗಳಿಂದ ಹಸಿರು ಕ್ರಿಯಾಸೇನೆ ಮೂಲಕ ಸಂಗ್ರಹಿಸಿದ ಮನೆ ತ್ಯಾಜ್ಯಗಳನ್ನು ಪೇರಿಸಿಟ್ಟಿದ್ದು, ಇದೀಗ ರುದ್ರಭೂಮಿಯೊಳಗೆಯೇ ಹೊಸ ಕಟ್ಟಡ ನಿರ್ಮಿಸಲು ಜೆಸಿಬಿ ತರಿಸಿ ಕಾಮಗಾರಿ ನಡೆಯುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಬದಿಯಡ್ಕ ಗ್ರಾಪಂ ವ್ಯಾಪ್ತಿಯ ಮಾನ್ಯ, ನೀರ್ಚಾಲು, ಪೆರಡಾಲ, ಕಾರ್ಮಾರು, ಬೇಳ, ಕನ್ನೆಪ್ಪಾಡಿ, ತಲ್ಪನಾಜೆ, ಎರಟ್ಟಿಕಾಯಿರ ಮೊದಲಾದ ಪ್ರದೇಶಗಳಿಗೆ ಪುದುಕೋಳಿಯದೊಂದೇ ರುದ್ರಭೂಮಿ ಇದ್ದು, ದಿನನಿತ್ಯ 3ರಿಂದ 4 ಅಂತ್ಯಕ್ರಿಯೆಗಳು ಇಲ್ಲೇ ನಡೆಯುತ್ತಿವೆ. ಹಸಿರು ಕ್ರಿಯಾಸೇನೆಗೆ ಅನಧಿಕೃತವಾಗಿ ತ್ಯಾಜ್ಯ ಸಂಗ್ರಹಿಸಲು ಸ್ಥಳಾವಕಾಶ ನೀಡಿರುವುದು ಸರಿಯಲ್ಲವೆಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಮೊಳೆಯಾರ, ಗ್ರಾಪಂ ಸದಸ್ಯೆ ಸ್ವಪ್ನಾ ಜೆ. ಆಗಮಿಸಿ ಪ್ರತಿಭಟನೆಗೆ ನೇತೃತ್ವ ನೀಡಿದರು. ಬಳಿಕ ಬದಿಯಡ್ಕ ಗ್ರಾಪಂ ಅಧ್ಯಕ್ಷೆ ಶಾಂತಾ ಬಾರಡ್ಕ, ಉಪಾಧ್ಯಕ್ಷ ಅಬ್ಬಾಸ್ ಎಂ., ಸಹ ಕಾರ್ಯದರ್ಶಿ ಸಜಿತ್ ಆಗಮಿಸಿ ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಿದರು. ಪ್ರಸ್ತುತ ನಿರ್ವಹಿಸಲಾಗುತ್ತಿರುವ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಿ, ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸ್ಥಳೀಯರಾದ ಸದಾಶಿವ, ಮಧುಚಂದ್ರ ಮಾನ್ಯ, ಮಂಜುನಾಥ ಪುದುಕೋಳಿ, ಕಿರಣ್ ನೀರ್ಚಾಲು, ರವಿಚಂದ್ರ ಮಲ್ಲಡ್ಕ, ಸತೀಶ್ ಏಣಿಯರ್ಪು, ಅಜಿತ್ ನೀರ್ಚಾಲು, ಎಸ್.ಕೆ.ಗೋಪಾಲಕೃಷ್ಣ ಭಟ್ ನೀರ್ಚಾಲು, ನಾಗರಾಜ ಮಲ್ಲಡ್ಕ, ಸತ್ಯ ನೀರ್ಚಾಲು, ಮಣಿಮಕಂಠ ವಿ.ನಗರ, ಪುನೀತ್ ಏಣಿಯರ್ಪು, ಮೋಹನ ಏಣಿಯರ್ಪು, ಮಂಜುನಾಥ ಚುಕ್ಕಿನಡ್ಕ, ಬಾಲಕೃಷ್ಣ ಮಲ್ಲಡ್ಕ, ಹರಿಪ್ರಸಾದ್ ರತ್ನಗಿರಿ, ಅರವಿಂದ ಭಟ್ ನೀರ್ಚಾಲು, ವಿಷ್ಣು ಶರ್ಮ ಮಲ್ಲಡ್ಕ ಇದ್ದರು.