

ಸರಗೂರು: ತಾಲೂಕಿನ ಲಕ್ಷ್ಮಣಾಪುರ, ಅಳಲಹಳ್ಳಿ ಗ್ರಾಮದ 152 ಬಡ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ, ಹಾಡಿ ಅರಣ್ಯ ಹಕ್ಕು ಸಮಿತಿ ಜಂಟಿಯಾಗಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ಹೆಡಿಯಾಲದಿಂದ ಹೊಸ ಬರ‌್ವಾಳ್ ಗ್ರಾಮದಲ್ಲಿರುವ ನುಗು ವನ್ಯಜೀವಿ ಅರಣ್ಯ ವಲಯ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು, ಕಚೇರಿ ಮುಂಭಾಗದಲ್ಲಿ ಜಮಾಯಿಸಿ 31ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ ಆದಿವಾಸಿ ನಾಯಕ ಬಿರ್ಸಾಮುಂಡ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಅರಣ್ಯ ಇಲಾಖೆ, ಸರ್ಕಾರ, ತಾಲೂಕು ಆಡಳಿತದ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಆದಿವಾಸಿ ಮುಖಂಡ ಶೈಲೇಂದ್ರ ಮಾತನಾಡಿ, ಲಕ್ಷ್ಮಣಾಪುರ ಗ್ರಾಮದ ಸರ್ವೇ ನಂ.30, 32 ಹಾಗೂ ಅಳಲಹಳ್ಳಿ ಗ್ರಾಮದ ಸರ್ವೇ ನಂ.10ರ ಜಮೀನಿನನ್ನು ಅರಣ್ಯ ಇಲಾಖೆಯವರು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ತೆರವುಗೊಳಿಸಿ ಯರವ, ಜೇನುಕುರುಬ, ಸೋಲಿಗ ಸಮುದಾಯಕ್ಕೆ ಸೇರಿದ 152 ಬಡ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಿಕೊಡಬೇಕು. ಎಲ್ಲ ಕುಟುಂಬಗಳು ತಲಾ 3 ಎಕರೆ ಜಮೀನು ಹೊಂದಿದ್ದು, ಕಲ್ಲಂಗಡಿ ಹಣ್ಣಿನ ಬೆಳೆ ಬೆಳೆದಿದ್ದರು. ಇದಕ್ಕೆ ರಾಸಾಯನಿಕ ಸಿಂಪಡಿಸುತ್ತಾರೆ ಎಂದು ಹಿಂದೆ ಅರಣ್ಯ ಇಲಾಖೆಯವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
2016-17ನೇ ಸಾಲಿನಿಂದ ಒತ್ತುವರಿ ಮಾಡಿಕೊಂಡ ಜಮೀನನ್ನು ಪಡೆಯಲು ಹಲವು ಬಾರಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕೂಡಲೇ ಅಧಿಕಾರಿಗಳು ಬಡ ಕುಟುಂಬಗಳ ಜೀವನ ನಿರ್ವಹಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತರಿಗೆ ಜಮೀನನ್ನು ಹಿಂತಿರುಗಿಸಬೇಕು. ಬಿರ್ಸಾಮುಂಡ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸುವಂತೆ ಆಗಬೇಕು. ದಲಿತ ಸಮುದಾಯದ 6 ಕುಟುಂಬಗಳಿಗೆ ಮೂಲ ದಾಖಲಾತಿಗಳಿದ್ದು, ಇವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಭೂಮಿಯನ್ನು ಇವರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಒಕ್ಕೂಟದ ಅಧ್ಯಕ್ಷ ಯಶವಂತಪುರ ನಾಗರಾಜು, ಒಕ್ಕೂಟದ ಸದಸ್ಯ ಇಂದ್ರಕುಮಾರ್, ಮಹದೇವಸ್ವಾಮಿ, ಬಸವರಾಜು, ಅಯ್ಯಪ್ಪ, ಸಿದ್ದರಾಜು, ದಾಸಪ್ಪ, ಮಾರಮ್ಮ, ಕೆಂಪಾಲಮ್ಮ, ಸರಗೂರು ಕೃಷ್ಣ, ಮುಳ್ಳೂರು ಪುಟ್ಟಸ್ವಾಮಿ, ಮಹಾದೇವಯ್ಯ, ವಾಲ್ಮೀಕಿ ಸಿದ್ದರಾಜು, ಶ್ರೀನಿವಾಸ, ಮಹಾಲಿಂಗ, ಪರಿಶಿಷ್ಟ ಪಂಗಡದ ಇಲಾಖೆ ಅಧಿಕಾರಿ ಮಹೇಶ್, ಪಿಎಸ್‌ಐ ಆರ್.ಕಿರಣ್, ಇನ್‌ಸ್ಪೆಕ್ಟರ್ ಗೋಪಾಲ್, ಆರ್‌ಎಫ್‌ಒಗಳಾದ ವಿವೇಕ್, ಅಮೃತಾ, ಕಂದಾಯ ಇಲಾಖೆ ಅಧಿಕಾರಿಗಳಾದ ರವಿಚಂದ್ರನ್, ಕುಮಾರ್, ಸಹಾಯಕ ಡಿಆರ್‌ಎಫ್‌ಒ ಅಭಿಲಾಷ್, ದೀಪಕ್, ಎಎಸ್‌ಐ ಕೃಷ್ಣಮಾರ್, ಶಿವಕುಮಾರ್ ಇದ್ದರು.