ಗ್ರಾಮ ಸಂಕಲ್ಪಸಮಾವೇಶದಲ್ಲಿ ಒಗ್ಗಟ್ಟು

ki
Published on

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ನಡೆಯುತ್ತಿರುವ ಭೂಸ್ವಾಧೀನ ವಿರೋಧಿ ಹೋರಾಟ ಸೋಮವಾರ 1197 ದಿನ ಪೂರೈಸಿದ್ದು, ಜು.15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅಂತಿಮ ಸಭೆ ನಡೆಯಲಿದೆ.

ಚನ್ನರಾಯಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಸಂಕಲ್ಪಸಮಾವೇಶದಲ್ಲಿ 13 ಹಳ್ಳಿಗಳ ರೈತರು ಭೂಮಿ ಕೊಡುವುದಿಲ್ಲ ಎಂಬ ನಿರ್ಧಾರವನ್ನು ಪುನರುಚ್ಚರಿಸಿ ಒಗ್ಗಟ್ಟು ಪ್ರದರ್ಶಿಸಿದರು.

ಕಳೆದ ಹತ್ತು ದಿನಗಳಿಂದ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ಗ್ರಾಮ ಸಭೆಗಳನ್ನು ನಡೆಸಲಾಗಿದ್ದು, ಒಟ್ಟಾರೆ 13 ಹಳ್ಳಿಗಳ ಶೇ.73 ರಿಂದ ಶೇ.80 ರೈತರು ಭೂಮಿ ಕೊಡುವುದಿಲ್ಲ ಎಂದು ಸಹಿ ಮಾಡಿದ್ದಾರೆ.

ರೈತ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಕೆ.ವಿ.ಭಟ್, ಮುಖ್ಯಮಂತ್ರಿ ಚಂದ್ರು, ದೇವಿ, ಕಾಳಪ್ಪ, ಅಪ್ಪಣ್ಣ, ಜಿ.ಜಿ.ನಾರಾಯಣಸ್ವಾಮಿ, ಆಂಜನೇಯ ರೆಡ್ಡಿ, ನಂಜಪ್ಪ ನಲ್ಲಪ್ಪನಹಳ್ಳಿ, ಮಾರೇಗೌಡ, ಕಾರಳ್ಳಿ ಶ್ರೀನಿವಾಸ್, ರಮೇಶ್ ಚೀಮಾಚನಹಳ್ಳಿ ಇತರರು ಇದ್ದರು.

ಭೂಮಿ ಕೇಳಲು ನೀವ್ಯಾರು?

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಕೆ.ಎಚ್. ಮುನಿಯಪ್ಪ ಅವರ ಮಾತುಗಳು ಭಿನ್ನವಾಗಿವೆ. ಹಸಿರು ವಲಯ ಎಂದು ಘೋಷಣೆ ಮಾಡುವ ಬೆದರಿಕೆ ಹಾಕಲಾಗುತ್ತದೆ. ಭೂಮಿ ಮಾಲೀಕರು ಏನು ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಅದನ್ನೆಲ್ಲಾ ಹೇಳುವುದಕ್ಕೆ ನೀವ್ಯಾರು? ಭೂಮಿ ನೀವೇ ಕೊಟ್ಟಿದ್ದರೆ ಹೀಗೆಲ್ಲಾ ಹೇಳಿದಂತೆ ಕೇಳಬಹುದಿತ್ತು. ಆದರೆ, ಈ ಭೂಮಿ ನಮ್ಮದು. ನೀವು ಸ್ವಾಧೀನ ಕೈಬಿಟ್ಟರೆ ಇದು ಹಸಿರು ವಲಯವಾಗಿಯೇ ಉಳಿಯುತ್ತದೆ. ನಾವೆಲ್ಲರೂ ರೈತರ ಜೊತೆಗಿರುತ್ತೇವೆ, ಈ ಹೋರಾಟವನ್ನು ಗೆದ್ದೇ ಗೆಲ್ಲುತ್ತೇವೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಗುರುಪ್ರಸಾದ್ ಕೆರಗೋಡು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net