ಚನ್ನರಾಯಪಟ್ಟಣದಲ್ಲಿ ಉಪವಾಸ ಸತ್ಯಾಗ್ರಹ

CPTN 1
Published on

 ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ನಿರಂತರ ಹೋರಾಟ ನಡೆಸುತ್ತಿರುವ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಪ್ರತಿಭಟನೆ ಕಾವು ಪಡೆದುಕೊಂಡಿದ್ದು ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ರೈತರು ಉಪವಾಸ ಸತ್ಯಾಗ್ರಹದ ಮೂಲಕ ಹೋರಾಟವನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.

ಇತ್ತೀಚಿಗೆ ನಡೆದ ದೇವನಹಳ್ಳಿ ಚಲೋ ಸಮಾವೇಶಕ್ಕೆ ರಾಜ್ಯದೆಲ್ಲೆಡೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸರ್ಕಾರಕ್ಕೂ ಬಿಸಿ ಮುಟ್ಟಿದೆ. ಪೊಲೀಸರ ಮೂಲಕ ಸಮಾವೇಶ ಸಮಾರೋಪಗೊಳಿಸಿದ್ದರ ಬಗ್ಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ನಡುವೆಯೇ ರೈತರು ಉಪವಾಸ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಬಿಗಿ ಪೆಟ್ಟು ನೀಡುತ್ತಿದ್ದಾರೆ.

ಸಚಿವ ಸಂಪುಟದಲ್ಲಿ ಚರ್ಚೆಯೇ ಇಲ್ಲ: ಇತ್ತೀಚಿಗೆ ನಂದಿಬೆಟ್ಟದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚನ್ನರಾಯಪಟ್ಟಣದಲ್ಲಿ ಉದ್ದೇಶಿಸಿರುವ 1777 ಎಕರೆ ಬಲವಂತದ ಭೂಸ್ವಾಧೀನ ಕೈಬಿಡುವ ವಿಚಾರವನ್ನು ವಿಶೇಷ ಚರ್ಚೆಯ ವಿಷಯವಾಗಿ ತೆಗೆದುಕೊಳ್ಳುವಂತೆ ಮತ್ತು ರೈತರ ಪರವಾದ ನಿರ್ಣಯಕ್ಕೆ ಬರಲು ಸಾತ್ವಿಕವಾಗಿ ಒತ್ತಡ ಹೇರಲಾಯಿತು. ಆದರೆ ಸಚಿವ ಸಂಪುಟದಲ್ಲಿ ಜಿಲ್ಲೆಯ ಹೆಸರು ಬದಲಾವಣೆ ವಿಷಯ ಮುನ್ನೆಲೆಗೆ ಬಂತು ಹೊರತು ಹೋರಾಟದ ಬಗ್ಗೆ ಯಾವ ಸೊಲ್ಲು ಕೇಳಿಬರಲಿಲ್ಲ. ಇದರಿಂದ ಆಕ್ರೋಶಗೊಂಡಿರುವ ಹೋರಾಟಗಾರರು ಉಪವಾಸ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸುವ ಪ್ರಯತ್ನ ಮುಂದುವರೆಸಿದ್ದಾರೆ.

ಚನ್ನರಾಯಪಟ್ಟಣದ ಉಪವಾಸ ಸತ್ಯಾಗ್ರಹದಲ್ಲಿ ಮಕ್ಕಳು, ಯುವಕರು, ಮಹಿಳೆಯರು, ಹಿರಿಯ ನಾಗರೀಕರು ಸೇರಿ 13 ಹಳ್ಳಿಯ ರೈತರು ಹಾಗೂ ರೈತಪರ ಹೋರಾಟಗಾರರಾದ ಆಂಜನೇಯ ರೆಡ್ಡಿ, ಚಂದ್ರ ತೇಜಸ್ವಿ ಮತ್ತು ಕಾರಳ್ಳಿ ಶ್ರೀೀನಿವಾಸ್ ಭಾಗಿಯಾಗಿದ್ದರು. ಇಲ್ಲಿ ಅನ್ನ ಬೆಳೆಯುವ ರೈತರೇ ಉಪವಾಸ ಕುಳಿತಿದ್ದಾರೆ, ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ಹೋರಾಟ ಗೆಲ್ಲಲೇಬೇಕು. ಈ ಹೋರಾಟ ಇಂದು ಕೇವಲ ಚನ್ನರಾಯಪಟ್ಟಣದ ರೈತರ ಹೋರಾಟವಾಗಿ ಉಳಿದಿಲ್ಲ, ಇಡೀ ಕರ್ನಾಟಕವೇ ಇಲ್ಲಿನ ರೈತರ ಉಳಿವಿನ ನಿರ್ಧಾರಕ್ಕಾಗಿ ಕಾಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾಗ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಜುಲೈ 4 ರಂದು ರೈತಪರ ನಿರ್ಣಯ ಹೊರಬರುತ್ತದೆ ಎಂಬ ನಿರೀಕ್ಷೆ ಇದೆ ಎಂದು ಹೋರಾಟಗಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೇಡಿಕೆಗೆ ಸ್ಪಂದಿಸಬೇಕು: ಸರ್ಕಾರ ರೈತರ ಹಿತದೃಷ್ಟಿ ಕಾಯಬೇಕು, ರೈತರಿಗೆ ಬೇಡವಾದ ವಿಷಯದಲ್ಲಿ ಸರ್ಕಾರ ಮೂಗು ತೂರಿಸುವ ಅಗತ್ಯವಿಲ್ಲ. ಸಾವಿರಾರು ದಿನಗಳ ಹೋರಾಟ, ಪ್ರತಿಭಟನೆಗೆ ಸರ್ಕಾರ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಉಗ್ರರೂಪ ಪಡೆಯಲಿದೆ ಈ ಬಗ್ಗೆ ಸರ್ಕಾರ ವಿವೇಚನೆಯಿಂದ ವರ್ತಿಸಿ ಹೋರಾಟಗಾರರ ಬೇಡಿಕೆಗೆ ಸ್ಪಂದಿಸಬೇಕು ಎಂದು ರೈತಪರ ಹೋರಾಟಗಾರ ಆಂಜನೇಯ ರೆಡ್ಡಿ ತಿಳಿಸಿದರು.

ಪ್ರೀಡಂ ಪಾರ್ಕ್‌ನಲ್ಲೂ ಉಪವಾಸ: ಇಲ್ಲಿ ಅನ್ನ ಬೆಳೆಯುವ ರೈತರು ಉಪವಾಸ ಕುಳಿತಿರುವಾಗ, ಅತ್ತ ನಮ್ಮನ್ನು ಬೆಂಬಲಿಸಿ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟಗಾರರು, ಪ್ರಗತಿಪರ ಚಿಂತಕರು, ಚಿತ್ರನಟರು, ನಿರ್ದೇಶಕರು, ಸಾಹಿತಿಗಳು, ಬರಹಗಾರರು ಉಪವಾಸ ಕುಳಿತಿದ್ದಾರೆ. ಅವರ ರೈತರ ಮೇಲಿನ ಕಾಳಜಿ ಮತ್ತು ತಾಯ್ತನದ ಪ್ರೀತಿಗೆ ನಾವು ಆಭಾರಿಯಾಗಿರುತ್ತೇವೆ. ದೇವನಹಳ್ಳಿಗೆ ಮಾತ್ರ ಸೀಮಿತವಾಗಿದ್ದ ಹೋರಾಟ ಇಂದು ನಾಡಿನ ಉದ್ದಗಲಕ್ಕೂ ಮಾತನಾಡುವಂತಾಗಿದೆ. ರಾಜ್ಯದ ಜನ ನಮ್ಮ ಕಷ್ಟವನ್ನು ತಮಗೆ ಬಂದೊದಗಿರುವ ಆತಂಕವೆಂಬಂತೆ ಭಾವಿಸಿ ನಮ್ಮ ಹೋರಾಟಕ್ಕೆ ಜತೆಯಾಗಿದ್ದಾರೆ ಎಂದು ರೈತ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಹೇಳಿದರು. ಅವರೆಲ್ಲರಿಗೂ ಇಲ್ಲಿನ ರೈತರಾದ ನಾವು ಹೃತ್ಪೂರ್ವಕ ಧನ್ಯವಾದ ತಿಳಿಸುತ್ತೇವೆ. ಈ ಹೋರಾಟ ನಮ್ಮ ಉಳಿವಿಗಾಗಿ ಮಾತ್ರವಲ್ಲ, ನಮ್ಮ ಕೃಷಿ ಪರಿಸರದ ಉಳಿವಿಗಾಗಿ, ಗ್ರಾಮೀಣ ಬದುಕಿನ ಉಳಿವಿಗಾಗಿ ಮಾಡುತ್ತಿರುವ ಹೋರಾಟ. ಆದ್ದರಿಂದ ನಾವು ಭರವಸೆ ನೀಡುತ್ತೇವೆ, ಈ ಭೂಮಿ ನಿಮ್ಮೆಲ್ಲರ ಬೆಂಬಲದಿಂದ ಉಳಿದೇ ಉಳಿಯುತ್ತದೆ. ನಾವು ಈ ನೆಲದ ಹಸಿರನ್ನು, ಗ್ರಾಮೀಣ ಸೊಗಡನ್ನು ಜೋಪಾನ ಮಾಡುತ್ತೇವೆ ಎಂದು ನಿಮಗೆ ಭರವಸೆ ನೀಡುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net