

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕೇರಳದ ಯುವಜನತೆ, ವಿದ್ಯಾರ್ಥಿಗಳು, ವೃದ್ಧರನ್ನು ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ವಂಚಿಸುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಬುಡಮೇಲುಗೊಳಿಸುತ್ತಿರುವ ಕೇರಳದ ಎಡರಂಗ ಸರ್ಕಾರದ ವಿರುದ್ಧ ಬಿಜೆಪಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಕಾಸರಗೋಡಿನ ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
70 ವರ್ಷ ದಾಟಿದ ಹಿರಿಯರಿಗೆ ಅರ್ಹವಾದ, ಕೇಂದ್ರ ಸರ್ಕಾರ ಜಾರಿಗೊಳಿಸಿದ ಆಯುಷ್ಮಾನ್ ಭಾರತ್ ಇನ್ಶೂರೆನ್ಸ್ ಯೋಜನೆಯ ಶೇ.40ರಷ್ಟು ಮೊತ್ತ ಆಯಾ ರಾಜ್ಯ ಭರಿಸಬೇಕೆಂಬ ನಿಬಂಧನೆ ಪಾಲಿಸದೆ ಇರುವುದರಿಂದ ಕೇರಳದಲ್ಲಿ ಮಹತ್ವದ ಯೋಜನೆ ಕೈ ತಪ್ಪುವಂತಾಗಿದೆ. ಉನ್ನತ ಶಿಕ್ಷಣಕ್ಕೆ ಕೇರಳದಲ್ಲಿ ಸೌಲಭ್ಯ ಇಲ್ಲದೆ ಅನ್ಯ ಜಿಲ್ಲೆ, ರಾಜ್ಯ ಅವಲಂಬಿಸುವ ಯುವಜನತೆ ಮರಳಿ ಕೇರಳಕ್ಕೆ ಬಾರದ ಪರಿಸ್ಥಿತಿ ಇದೆ. ಶಿಕ್ಷಣಕ್ಕೆ ಜಾರಿಗೊಳಿಸಿದ ಪಿಎಂಶ್ರೀ ಯೋಜನೆ ಅನುಷ್ಠಾನಗೊಳಿಸದೆ ವಿದ್ಯಾರ್ಥಿಗಳಿಗೆ ವಂಚನೆ ಎಸಗಿರುವುದಾಗಿ ಆರೋಪಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಬಾಲರಾಜ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಪಿ.ಆರ್.ಸುನೀಲ್, ಪುಷ್ಪಾ ಗೋಪಾಲನ್, ಸವಿತಾ, ಪಿ.ರಮೇಶ, ಎಂ.ಸಂಜೀವ ಶೆಟ್ಟಿ, ವಿ.ರವೀಂದ್ರನ್, ಎ.ವೇಲಾಯುಧನ್, ಎಂ.ಭಾಸ್ಕರ, ಮಧೂರು ಗ್ರಾಪಂ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಬೆಳ್ಳೂರು ಗ್ರಾಪಂ ಅಧ್ಯಕ್ಷ ಶ್ರೀಧರ ಬೆಳ್ಳೂರು, ಸತೀಶ್ಚಂದ್ರ ಭಂಡಾರಿ ಕೋಳಾರು, ಕೆ.ರಾಜಗೋಪಾಲ, ಲೋಕೇಶ್ ನೋಂಡ, ಕೆ.ಎಂ.ಅಶ್ವಿನಿ, ಪ್ರಮೀಳಾ ಮಜಲ್, ಮಹೇಶ್ ಗೋಪಾಲ್ ಮತ್ತಿತರರಿದ್ದರು.